ಉಡುಪಿ ಬಡಗಬೆಟ್ಟು ಕ್ರೆಡಿಟ್‌ ಕೋ-–ಆಪರೇಟಿವ್‌ ಸೊಸೈಟಿಯ ಶತಮಾನೋತ್ಸವ

ಉಡುಪಿ:  ಸಹಕಾರಿ ಸಂಘವು ದೇಶದ ಅಭಿವೃದ್ಧಿಗೆ ದೊಡ್ಡಮಟ್ಟದ ಕೊಡುಗೆ ನೀಡಿದೆ ಎಂದು ಮಂಗಳೂರು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ಹೇಳಿದರು.

ಉಡುಪಿ ಬಡಗಬೆಟ್ಟು ಕ್ರೆಡಿಟ್‌ ಕೋ-–ಆಪರೇಟಿವ್‌ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯ ಸಮಾರೋಪದ ಸಮಾರಂಭದ ಪ್ರಯುಕ್ತ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸಹಕಾರಿಗಳ ಸಮ್ಮಿಲ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಆರ್‌ಬಿಐಯಲ್ಲಿ ಸಹಕಾರಿ ಸಂಘಗಳಿಗೆ ಬ್ಯಾಂಕ್‌ ಮಾನ್ಯತೆ ಕೊಡುವ ಅವಕಾಶವಿದ್ದರೆ, ಮೊತ್ತ ಮೊದಲು ಬಡಗಬೆಟ್ಟು ಸೊಸೈಟಿಗೆ ಅವಕಾಶ ನೀಡಬೇಕು. ಉಡುಪಿ ಸಹಕಾರಿ ಕ್ಷೇತ್ರದ ಕಾಶಿಯಾಗಿದೆ ಎಂದರು.

ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು. ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್‌ ಅಧ್ಯಕ್ಷತೆ ವಹಿಸಿದ್ದರು.
ಬ್ಯಾಂಕ್‌ ಆಫ್‌ ಬರೋಡಾದ ಉಡುಪಿ ಪ್ರಾದೇಶಿಕ ವ್ಯವಸ್ಥಾಪಕ ರವೀಂದ್ರ ರೈ, ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಪಿ. ಶೆಟ್ಟಿ, ಲೆಕ್ಕಪರಿಶೋಧಕಿ ಹರಿಣಿ ಜಿ. ರಾವ್‌, ಸೊಸೈಟಿಯ ಉಪಾಧ್ಯಕ್ಷ ಎಲ್‌. ಉಮಾನಾಥ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಮಾರು 25 ವರ್ಷಗಳಿಗೂ ಅಧಿಕ ಸೇವೆ ಸಲ್ಲಿಸಿದ ಪೌರ ಕಾರ್ಮಿಕರು, ಲೈನ್‌ಮ್ಯಾನ್‌ಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಬಡಗಬೆಟ್ಟು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.