ಉಡುಪಿ: ಶತಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿರುವ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆಯು ಸೆ.17 ರವಿವಾರದಂದು ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ಇವರ ಅಧ್ಯಕ್ಷತೆಯಲ್ಲಿ ಉಡುಪಿ ಅಜ್ಜರಕಾಡು ಟೌನ್ ಹಾಲ್‌ನಲ್ಲಿ ಜರಗಿತು.
ಸಹಕಾರಿ ತತ್ವಗಳೊಂದಿಗೆ ಸದಾ ಸಮರ್ಪಣಾಭಾವದ ಸಂಗಮವಾಗಿ ಸಮೃದ್ಧಿಯ ಹಸಿರ ಹೆಮ್ಮರವಾಗಿ ಬೆಳೆದು ಜಿಲ್ಲೆಯಲ್ಲಿ ವಿಭಿನ್ನ ಛಾಪು ಮೂಡಿಸಿ ರಾಜ್ಯದಲ್ಲಿಯೇ ಸಹಕಾರಿ ರಂಗದ ಮಾದರಿ ಸಹಕಾರ ಸಂಘವಾಗಿ ಸಂಘವು ಗುರುತಿಸಲ್ಪಟ್ಟಿದೆ. 1918 ರಲ್ಲಿ ಆರಂಭಗೊಂಡು ಸಹಕಾರಿ ಸದಾಶಯಗಳ ಹಾದಿಯಲ್ಲಿ ಶತಮಾನೋತ್ತರ ಕ್ರಮಿಸುವಿಕೆಯೊಂದಿಗಿರುವ ಸೊಸೈಟಿಗೆ ಮಹತ್ವಪೂರ್ಣವಾದ ಉನ್ನತ ಸಂಗತಿಗಳು ದಾಖಲುಗೊಂಡಿವೆ. ನಿರ್ದಿಷ್ಟ ಉದ್ದೇಶಗಳಿಗೆ ಯಶಸ್ಸಿನ ಹಾದಿ ಇರುತ್ತದೆ ಎನ್ನುವುದಕ್ಕೆ ಸ್ಪಷ್ಟ ಸಮರ್ಥನೆಯಾಗಿ ಸಂಸ್ಥೆಯು ಸವಿಸ್ತಾರಗೊಂಡಿದೆ.
ಸಂಘದ ಸಾಧನೆಗೆ ಮುಕುಟಪ್ರಾಯವಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಸಹಕಾರ ಸಂಸ್ಥೆ ಎಂಬ ನೆಲೆಯಲ್ಲಿ ಕೇಂದ್ರ ಸರಕಾರದಿಂದ 2 ರಾಷ್ಟ್ರೀಯ ಪ್ರಶಸ್ತಿಗಳು, ರಾಜ್ಯ ಸರಕಾರದಿಂದ 7 ರಾಜ್ಯ ಪ್ರಶಸ್ತಿಗಳು, 17 ಅವಿಭಜಿತ ದ.ಕ ಜಿಲ್ಲಾ ಪ್ರಶಸ್ತಿಗಳನ್ನೂ, ಹಾಗೂ ಇತರ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಸಂಘವು ಪಡೆದಿರುತ್ತದೆ.
ಸಂಘದ ಅಧ್ಯಕ್ಷ ಸಂಜೀವ ಕಾಂಚನ್‌ರವರು ವಾರ್ಷಿಕ ವರದಿಯನ್ನು ಮತ್ತು ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು. ವರದಿ ಸಾಲಿನ ಅಂತ್ಯಕ್ಕೆ ಸಂಘವು ಒಟ್ಟು 20,147 ಸದಸ್ಯರಿಂದ ರೂ. 4.75 ಕೋಟಿ ಪಾಲು ಬಂಡವಾಳ ಹಾಗೂ ರೂ. 451.43 ಕೋಟಿ ಠೇವಣಿ ಹೊಂದಿದ್ದು, ರೂ. 338.01 ಕೋಟಿ ಹೊರಬಾಕಿ ಸಾಲ ಹೊಂದಿರುತ್ತದೆ. ಸಂಘವು 2022-23 ನೇ ಸಾಲಿನಲ್ಲಿ ಸರಿಸುಮಾರು ರೂ. 2330 ಕೋಟಿ ವಾರ್ಷಿಕ ವಹಿವಾಟು ನಡೆಸಿರುತ್ತದೆ.
ವರದಿ ಸಾಲಿನಲ್ಲಿ ಸಂಘವು ರೂ.14.01 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಯಿತು. ಸಂಘವು ಕೇವಲ ಬ್ಯಾಂಕಿಂಗ್ ವ್ಯವಹಾರ ಮಾಡಿ ಲಾಭಗಳಿಸುವ ದೃಷ್ಟಿಯನ್ನು ಇಟ್ಟುಕೊಳ್ಳದೇ ಸಂಘದ ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಸೇವೆ ನೀಡುವ ಸಲುವಾಗಿ ಈಗಾಗಲೇ ಸೇಫ್ ಲಾಕರ್, ಇ-ಸ್ಟಾಂಪಿಂಗ್, ಪಾನ್ ಕಾರ್ಡ್, NEFT/RTGS,, ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್ಫರ್, ರಿಯಾ ಮನಿ ಟ್ರಾನ್ಸ್ಫರ್, ಲಂಬಾರ್ಡ್ ಆರೋಗ್ಯ ಕಾರ್ಡ್, ಮಣಿಪಾಲ ಆರೋಗ್ಯ ಕಾರ್ಡ್, ಎಸ್‌ಎಮ್‌ಎಸ್ ಮುಖಾಂತರ ಸಂದೇಶ ರವಾನಿಸುವ ಸೌಲಭ್ಯಗಳನ್ನು ಈಗಾಗಲೇ ಕಲ್ಪಿಸಲಾಗಿದೆ ಹಾಗೂ ಭಾರತೀಯ ಜೀವ ವಿಮಾ ನಿಗಮದ ಭಾಗ್ಯಲಕ್ಷ್ಮಿ ಮೈಕ್ರೋ ಇನ್ಶೂರೆನ್ಸ್ ಜೀವವಿಮಾ ಪಾಲಿಸಿ ಹಾಗೂ ವಾಹನ, ಆಸ್ತಿ, ಆರೋಗ್ಯ ವಿಮಾ ಪಾಲಿಸಿ, ಸದಸ್ಯರಿಗೆ ಉಳಿತಾಯ ಖಾತೆಯ ಬ್ಯಾಲೆನ್ಸ್ ತಿಳಿಯಲು ಮಿಸ್ಡ್ಕಾಲ್ ಸರ್ವಿಸ್, ಎಸ್.ಎಂ.ಎಸ್ ಸೌಲಭ್ಯ ಅಳವಡಿಸಿರುತ್ತದೆ. ಸಂಘವು ತನ್ನ ಕಾರ್ಯವ್ಯಾಪ್ತಿಯಲ್ಲಿ ಒಟ್ಟು 10 ಶಾಖೆಗಳನ್ನು ಈಗಾಗಲೇ ಹೊಂದಿದ್ದು, ಕೇವಲ ವ್ಯವಹಾರ ಮಾಡಿ ಲಾಭ ಗಳಿಸುವ ದೃಷ್ಟಿಯನ್ನು ಮಾತ್ರ ಇಟ್ಟುಕೊಳ್ಳದೆ ಸಾಮಾಜಿಕ ಕಳಕಳಿಯ, ಮಾನವೀಯ ಮೌಲ್ಯಾತ್ಮಕವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ.
ವಾರ್ಷಿಕ ಸುಮಾರು ರೂ. 15 ಲಕ್ಷದಷ್ಟು ಶಿಕ್ಷಣ, ಆರೋಗ್ಯ, ಸಾಮಾಜಿಕ ಕಾರ್ಯಕ್ರಮಗಳಿಗೆ ತೊಡಗಿಸುತ್ತಿದೆ ಎಂದರು.
ಸಂಘದ ಆಡಳಿತ ಮಂಡಳಿ ಸದಸ್ಯರಾದ ಪುರುಷೋತ್ತಮ ಪಿ. ಶೆಟ್ಟಿ. ಹಾಜಿ ಸಯ್ಯದ್ ಅಬ್ದುಲ್ ರಜಾಕ್,
ವಸಂತ ಕೆ. ಕಾಮತ್, ವಿನಯ ಕುಮಾರ್ ಟಿ.ಎ., ಜಯಾನಂದ ಸಿ ಮೈಂದನ್, ಪದ್ಮನಾಭ ಕೆ ನಾಯಕ್, ರಘುರಾಮ ಎಸ್.ಶೆಟ್ಟಿ, ಜಾರ್ಜ್ ಸಾಮ್ಯುವೆಲ್, ಸದಾಶಿವ ನಾಯ್ಕ್, ಶ್ರೀಮತಿ ಜಯ ಶೆಟ್ಟಿ, ಶ್ರೀಮತಿ ಗಾಯತ್ರಿ ಎಸ್. ಭಟ್, ಪ್ರಭಾರ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಎಲ್.ಉಮಾನಾಥ್ ವಂದಿಸಿದರು.