ನಾಗ್ಪುರ-ಬೆಂಗಳೂರು ಇಂಡಿಗೋ ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ ಹಿನ್ನೆಲೆ : ಪ್ರಯಾಣಿಕನ ಬಂಧನ, ಬಿಡುಗಡೆ

ಬೆಂಗಳೂರು: ಮಹಾರಾಷ್ಟ್ರದ ನಾಗ್ಪುರದಿಂದ ಬೆಂಗಳೂರಿಗೆ ಆಗಮಿಸಿದ ಇಂಡಿಗೋ ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆಯಲು ಯತ್ನಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದರು.ಬಳಿಕ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಘಟನೆ ಸೆಪ್ಟೆಂಬರ್ 30ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಪೊಲೀಸರ ಪ್ರಕಾರ, ಪ್ರಯಾಣಿಕ ಸ್ವಪ್ನಿಲ್​ ಹೋಲೆ ವಿಮಾನದ ತುರ್ತು ನಿರ್ಗಮನ ಬಾಗಿಲಿನ ಪಕ್ಕದಲ್ಲಿ ಕುಳಿತಿದ್ದ. ಟೇಕ್‌ಆಫ್‌ಗೆ ಮುನ್ನ ವಿಮಾನ ಸಿಬ್ಬಂದಿ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದಾಗ, ಸ್ವಪ್ನಿಲ್​ ಎಮರ್ಜೆನ್ಸಿ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಯಾಕಾಗಿ ಆತ ಹೀಗೆ ವರ್ತಿಸಿದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರ ಕಿರಿಕ್​ ಮತ್ತೆ ವರದಿಯಾಗಿದೆ. ಟೇಕ್​ ಆಫ್​ ವೇಳೆ ಪ್ರಯಾಣಿಕನೊಬ್ಬ ಎಮರ್ಜೆನ್ಸಿ ಬಾಗಿಲು ತೆರೆಯಲು ಯತ್ನಿಸಿದ್ದಾನೆ.

ಬೆಂಗಳೂರಿನಲ್ಲಿ ಬಂಧನ: ಪ್ರಯಾಣಿಕನ ಆಕ್ಷೇಪಾರ್ಹ ನಡೆಯ​ ನಡುವೆಯೂ ಇಂಡಿಗೋ ವಿಮಾನ ನಾಗ್ಪುರದಿಂದ ಬೆಂಗಳೂರಿಗೆ ಆಗಮಿಸಿದೆ. ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾತ್ರಿ 11.55ಕ್ಕೆ ವಿಮಾನ ಇಳಿದ ನಂತರ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಬಾಗಿಲು ತೆರೆಯಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.ಅಂದು ರಾತ್ರಿ 10 ಗಂಟೆಗೆ ಇಂಡಿಗೋ ಸಂಸ್ಥೆಯ 6E 6803 ವಿಮಾನ ಮಹಾರಾಷ್ಟ್ರದ ನಾಗ್ಪುರದಿಂದ ಬೆಂಗಳೂರಿಗೆ ಹೊರಟಿತ್ತು. ಇದೇ ವೇಳೆ ಸ್ವಪ್ನಿಲ್ ಹೋಲೆ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ವಿಮಾನ ಇನ್ನೇನು ಟೇಕ್ ಆಫ್ ಆಗಬೇಕು ಎನ್ನುವ ಹೊತ್ತಿಗೆ ಬಾಗಿಲು ತೆರೆಯಲು ಮುಂದಾಗಿದ್ದಾನೆ. ತಕ್ಷಣವೇ ಸಿಬ್ಬಂದಿ ಆತನನ್ನು ತಡೆದು ನಿಲ್ಲಿಸಿದ್ದಾರೆ. ಬಳಿಕ ವಿಮಾನ ಬೆಂಗಳೂರಿಗೆ ಪ್ರಯಾಣಿಸಿದೆ.

ಆಕಸ್ಮಾತ್​ ಆಗಿ ಬಾಗಿಲು ತೆಗೆದ ಪ್ರಯಾಣಿಕ: ಇನ್ನೊಂದು ಘಟನೆಯಲ್ಲಿ, ಇಂಡಿಯೋ ವಿಮಾನದ ಪ್ರಯಾಣಿಕ ತುರ್ತು ಬಾಗಿಲು ತೆರೆದ ಘಟನೆ ಈಚೆಗೆ ನಡೆದಿತ್ತು. ಇದರ ಬಳಿಕ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ, ತಪಾಸಣೆ ನಡೆಸಿ ವಿಳಂಬವಾಗಿ ವಿಮಾನವನ್ನು ಮರು ಹಾರಾಟ ನಡೆಸಲಾಗಿತ್ತು.

ವಿಮಾನ ಟೆಕ್​ಆಫ್​ ಆಗುವ ಮುನ್ನವೇ ಆಕಸ್ಮಿಕವಾಗಿ ಘಟನೆ ನಡೆದಿದೆ. ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು, ತುರ್ತು ಬಾಗಿಲು ಬಂದ್​ ಮಾಡಿ, ಸುರಕ್ಷತಾ ಕ್ರಮಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ವಹಿಸಲಾಗಿತ್ತು ಎಂದು ಡಿಜಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದರು.ಏರ್‌ಲೈನ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯ) ಕಲಂನಡಿ ಎಫ್‌ಐಆರ್ ದಾಖಲಿಸಿ, ಆರೋಪಿ ಪ್ರಯಾಣಿಕನನ್ನು ಬಂಧಿಸಲಾಗಿದೆ. ಆದರೆ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ. ಆತ ಅಕ್ಟೋಬರ್ 1 ರಂದು ಬ್ಯಾಂಕಾಕ್‌ಗೆ ವಿಮಾನದಲ್ಲಿ ತೆರಳಬೇಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.