ಅಥ್ಲೀಟ್ ದ್ಯುತಿ ಚಂದ್​ ಉದ್ದೀಪನ ಮದ್ದು ಸೇವನೆ ಹಿನ್ನೆಲೆ : 4 ವರ್ಷ ನಿಷೇಧ

ನವದೆಹಲಿ: ಏಷ್ಯನ್‌ ಗೆಮ್ಸ್​​ನಲ್ಲಿ ಎರಡು ಬೆಳ್ಳಿ ಪದಕ ಸಂಪಾದಿಸಿದ ಭಾರತದ ಮಹಿಳಾ ಅಥ್ಲೀಟ್ ದ್ಯುತಿ ಚಂದ್ ಅವರಿಗೆ ವಿಶ್ವ ಉದ್ದೀಪನ ಮದ್ದು ತಡೆ ಸಂಸ್ಥೆಯು (WADA) ನಾಲ್ಕು ವರ್ಷಗಳ ಕಾಲ ನಿಷೇಧ ಶಿಕ್ಷೆ ವಿಧಿಸಿದೆ.ಕಳೆದ ವರ್ಷ ಡಿಸೆಂಬರ್ 5ರಂದು ಸಂಗ್ರಹಿಸಿದ್ದ ಮಾದರಿಯಲ್ಲಿ ಆಂಡ್ರೊಜೆನ್ ರಿಸೆಪ್ಟರ್ ಮಾಡ್ಯುಲೇಟರ್‌ಗಳಿಗೆ (ಎಸ್‌ಎಆರ್‌ಎಂ) ಕಂಡು ಬಂದಿದ್ದರಿಂದ ನಿಷೇಧ ಹೇರಲಾಗಿದೆ. ಹೀಗಾಗಿ ಮುಂದಿನ ನಾಲ್ಕು ವರ್ಷಗಳ ಕಾಲ ದ್ಯುತಿ ಯಾವುದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ. ನಿಷೇಧದ ಅವಧಿ ಜನವರಿ 3, 2023ರಿಂದ ಜಾರಿಗೆ ಬರಲಿದೆ. ಜನವರಿ 2027ರ ವರೆಗೆ ಇರಲಿದೆ.2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ 100 ಮೀ ಮತ್ತು 200 ಮೀ ಓಟದಲ್ಲಿ ಬೆಳ್ಳಿ ಪದಕ ಗೆದ್ದಿರುವ ಅಥ್ಲೀಟ್‌ ದ್ಯುತಿ ಚಂದ್​ ಉದ್ದೀಪನ ಮದ್ದು ಸೇವನೆ ಮಾಡಿದ್ದಕ್ಕಾಗಿ ನಾಲ್ಕು ವರ್ಷ ನಿಷೇಧಕ್ಕೊಳಗಾಗಿದ್ದಾರೆ.

ನಾಲ್ಕು ವರ್ಷದ ನಿಷೇಧದ ಜೊತೆಗೆ ಅವರು ಗೆದ್ದಿರುವ ಪದಕಗಳು, ಅಂಕಗಳು ಮತ್ತು ಬಹುಮಾನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯ (NADA) 2.1 ಮತ್ತು 2.2 ನಿಯಮ ಉಲ್ಲಂಘಿಸಿದ್ದಕ್ಕಾಗಿ ನಿಷೇಧಿಸಲಾಗಿದೆ. ಆಯಂಟಿ-ಡೋಪಿಂಗ್ ಅಪೀಲ್ ಪ್ಯಾನೆಲ್‌ಗೆ (ADAP) ಮೇಲ್ಮನವಿ ಸಲ್ಲಿಸಲು ದ್ಯುತಿ ಅವರಿಗೆ ನಿಷೇಧ ಪತ್ರ ಸ್ವೀಕರಿಸಿದ ನಂತರ 21 ದಿನಗಳ ಅವಕಾಶವಿದೆ.

ಪ್ರತಿಕೂಲ ವಿಶ್ಲೇಷಣಾತ್ಮಕ ಪತ್ತೆ (ಎಎಎಫ್) ಸೂಚನೆಯನ್ನು ಸ್ವೀಕರಿಸಿದ ದಿನಾಂಕದಿಂದ ಏಳು ದಿನಗಳ ಅವಧಿಯೊಳಗೆ ದ್ಯುತಿ ತನ್ನ ‘ಬಿ’ ಮಾದರಿ ಪರೀಕ್ಷೆಗೆ ಹೋಗುವ ಆಯ್ಕೆ ಹೊಂದಿದ್ದರು. ಅದರೂ ಅವರು ಈ ಆಯ್ಕೆ ಮಾಡಿಕೊಂಡಿರಲಿಲ್ಲ. ಈಗ ಬಂದಿರುವ ವರದಿಯನ್ವಯ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಏಜೆನ್ಸಿಯಿಂದ ತಾತ್ಕಾಲಿಕ ಅಮಾನತು ಹೇರಲಾಗಿದೆ.

ದ್ಯುತಿ ಅವರು ಫಿಸಿಯೋಥೆರಪಿಸ್ಟ್ ನೀಡಿದ ಶಿಫಾರಸಿನ ಮೇರೆಗೆ ನಿಷೇಧಿತ ಔಷಧ ಸೇವಿಸಿದ್ದಾರೆ. ಇದಕ್ಕೆ ಯಾವುದೇ ವೈದ್ಯಕೀಯ ಸಲಹೆ ಇರಲಿಲ್ಲ ಎನ್ನಲಾಗಿದೆ. ವಾಡಾ ಇತ್ತೀಚೆಗೆ ಕೆಲ ಪದಾರ್ಥಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಿತ್ತು.2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ 100 ಮೀ ಮತ್ತು 200 ಮೀ ಓಟಗಳಲ್ಲಿ ಎರಡು ಬೆಳ್ಳಿ ಪದಕ ವಿಜೇತೆ ದ್ಯುತಿ ಅವರನ್ನು ಭುವನೇಶ್ವರದಲ್ಲಿ ನಾಡಾದ ಡೋಪ್ ನಿಯಂತ್ರಣ ಅಧಿಕಾರಿಗಳು ಡಿಸೆಂಬರ್ 5 ಮತ್ತು 26, 2022ರಂದು ಎರಡು ಬಾರಿ ಪರೀಕ್ಷಿಸಿದ್ದರು. ಮೊದಲ ಮಾದರಿಯಲ್ಲಿ ಅನಾಬೋಲಿಕ್ ಏಜೆಂಟ್‌ಗಳಾದ ಆಂಡರಿನ್, ಒಸ್ಟರಿನ್ ಮತ್ತು ಲಿಗಾಂಡ್ರೊಲ್ ಇರುವಿಕೆ, ಎರಡನೇ ಮಾದರಿಯು ಆಂಡರಿನ್ ಮತ್ತು ಒಸ್ಟರಿನ್ ಇರುವುದು ಪತ್ತೆಯಾಗಿತ್ತು.