ಮತ್ತೆ ಕಾಂಗ್ರೆಸ್ ಸೇರಿದ ಬಾಬುರಾವ್ ಚಿಂಚನಸೂರು: ಖರ್ಗೆ, ಡಿಕೆಶಿ ನಾಯಕತ್ವಕ್ಕೆ ಬೆಂಬಲ

ಬೆಂಗಳೂರು: ಇತ್ತೀಚೆಗೆಗಷ್ಟೇ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ಹಿರಿಯ ಮುಖಂಡ ಬಾಬೂರಾವ್‌ ಚಿಂಚನಸೂರು ಬುಧವಾರ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರ ಸಮ್ಮುಖದಲ್ಲಿ ಕಾಂಗ್ರೆಸ್’ಗೆ ಸೇರ್ಪಡೆಯಾಗಿದ್ದಾರೆ.

ಕೋಲಿ ಸಮಾಜದ ಪ್ರಮುಖ ನಾಯಕರಾಗಿರುವ ಚಿಂಚನಸೂರ್ ಅವರು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವರಾಗಿದ್ದರು. ಬಳಿಕ ಮುನಿಸಿಕೊಂಡು ಬಿಜೆಪಿ ಸೇರಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್’ನ ಮಲ್ಲಿಕಾರ್ಜುನ ಖರ್ಗೆಯಯವರನ್ನು ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬಳಿಕ ಬಿಜೆಪಿಯಿಂದ ವಿಧಾನ ಪರಿಷತ್’ಗೂ ಆಯ್ಕೆಯಾಗಿದ್ದರು. ಸೋಮವಾರ ಹುಬ್ಬಳ್ಳಿಯಲ್ಲಿ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಮಾಡಿ ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆ ಅಂಗೀಕಾರವೂ ಆಗಿತ್ತು.

ಈ ವೇಳೆ ಮಾತನಾಡಿದ ಚಿಂಚನಸೂರು, ಖರ್ಗೆ ಮತ್ತು ಡಿಕೆಶಿ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಡಿಕೆಶಿ ಅವರು ತಮಗೆ ಮಾಡಿದ ಉಪಕಾರವನ್ನು ಏಳು ಜನ್ಮದಲ್ಲೂ ಮರೆಯಲ್ಲ ಎಂದು ಹೇಳಿದರು.