ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಇಂದು ತೀರ್ಪು ಪ್ರಕಟ

ಲಖನೌ: ಐತಿಹಾಸಿಕ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಲಖನೌನ ಸಿಬಿಐ ವಿಶೇಷ ಕೋರ್ಟ್ ನಿಂದ ಇಂದು ತೀರ್ಪು ಪ್ರಕಟವಾಗಲಿದೆ. ಮಧ್ಯಾಹ್ನ 12 ಗಂಟೆ ವೇಳೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ.

ಕಳೆದ ತಿಂಗಳು ಕೋರ್ಟ್ ವಿಚಾರಣೆ ಪೂರ್ಣಗೊಳಿಸಿದ್ದು, ಇಂದು ನ್ಯಾಯಾಧೀಶ ಎಸ್.ಕೆ. ಯಾದವ್ ಅವರು ಈ ಐತಿಹಾಸಿಕ ತೀರ್ಪು ಮಂಡಿಸುವರು.

ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್ ಸೇರಿದಂತೆ 32 ಆರೋಪಿಗಳಿಗೆ ಖುದ್ದು ಕೋರ್ಟ್ ಗೆ ಹಾಜರಾಗಲು ಸೂಚನೆ ನೀಡಲಾಗಿದೆ.

ಧರ್ಮಗಳ ಆಧಾರದ ಮೇಲೆ ದ್ವೇಷ ಬಿತ್ತಿದ ಆರೋಪ. ಐಪಿಸಿ ಸೆಕ್ಷನ್ 153 (ಎ) ಅಡಿ ದ್ವೇಷ ಬಿತ್ತಿದ ಆರೋಪ. 153 ಬಿ ಅಡಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತಂದ ಆರೋಪ. 120 ಬಿ ಅಡಿ ಕ್ರಿಮಿನಲ್ ಒಳಸಂಚು ನಡೆಸಿದ ಆರೋಪ. 505ರಡಿ ಸಾರ್ವಜನಿಕರ ದಾರಿ ತಪ್ಪಿಸಲು ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ.

ಈ ಸೆಕ್ಷನ್ ಗಳಡಿ ಆರೋಪ ಸಾಬೀತಾದರೆ, ಕೋರ್ಟ್ 6 ತಿಂಗಳಿನಿಂದ ಐದು ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಜೈಲು ಶಿಕ್ಷೆಯ ಜೊತೆಗೆ ದಂಡ ವಿಧಿಸುವ ಸಾಧ್ಯತೆಯೂ ಇದೆ.