ಉಡುಪಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಇಂದು ನೀಡಿದ ತೀರ್ಪು ಸತ್ಯಕ್ಕೆ ಸಂದ ಜಯ. ಶ್ರೀ ರಾಮನ ಧ್ಯೇಯವಾಖ್ಯಕ್ಕೆ ಪೂರಕವಾಗಿ ಬಂದಿರುವ ತೀರ್ಪು ಸ್ವಾಗತಾರ್ಹ ಎಂದು ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
ಸತ್ಯ ಎಂದಿಗೂ ಸತ್ಯವೇ, ಈಗ ಈ ತೀರ್ಪು ನಮ್ಮ ನಂಬಿಕೆಯನ್ನು ಸಾಕ್ಷಾತ್ಕರಿಸಿದಂತಾಗಿದೆ. ನಮ್ಮ ಹಿರಿಯ ಮುತ್ಸದ್ಧಿ ನಾಯಕರಾದ ಅಡ್ವಾಣಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ಸಿಂಗ್, ಉಮಾ ಭಾರತಿ, ವಿನಯ್ ಕಟಿಯಾರ್ ಮುಂತಾದವರನ್ನು ಈ ಪ್ರಕರಣದ ಷಡ್ಯಂತ್ರದಲ್ಲಿ ಸಿಲುಕಿಸುವ ದೊಡ್ಡ ರಾಜಕೀಯ ಹುನ್ನಾರವೇ ನಡೆದಿತ್ತು. ಆದರೆ ಈ ನ್ಯಾಯ ನಿರ್ಣಯದಿಂದಾಗಿ ಪಟ್ಟಭದ್ರರಿಗೆ ಮುಖಭಂಗವಾಗಿದೆ ಎಂದಿದ್ದಾರೆ.
ಈ ಎಲ್ಲಾ ಹಿರಿಯ ಮುಖಂಡರಿಗೆ ವಿನಾಕಾರಣ ಮಾನಸಿಕ ಕಿರುಕುಳ ನೀಡುವ ಉದ್ದೇಶ ಹೊಂದಿದ್ದ ಕೆಲವು ರಾಜಕೀಯ ಶಕ್ತಿಗಳಿಗೆ ನಮ್ಮ ನ್ಯಾಯಾಂಗ ವ್ಯವಸ್ಥೆಯು ತಕ್ಕ ಶಾಸ್ತಿ ಮಾಡಿದೆ ಎಂದು ಹೇಳಿದ್ದಾರೆ.
ಪವಿತ್ರವಾದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರವನ್ನು ನಿರ್ಮಿಸಬೇಕೆಂಬ ನಿಟ್ಟಿನಲ್ಲಿ ಅನೇಕ ಮುಖಂಡರು, ಸಾಧುಸಂತರು, ಕರಸೇವಕರು, ಶ್ರೀ ರಾಮನ ಭಕ್ತರು ಮತ್ತು ಬಿಜೆಪಿಯ ಸಮಸ್ತರೂ ಹಲವು ವರ್ಷಗಳಿಂದ ಹೋರಾಟ, ತ್ಯಾಗ ಬಲಿದಾನಗಳನ್ನು ಕೈಗೊಂಡಿದ್ದರು. ಈ ಎಲ್ಲಾ ಹೋರಾಟಗಳಿಗೆ ಈ ತೀರ್ಪಿನಿಂದಾಗಿ ಮತ್ತೊಮ್ಮೆ ಮೌಲ್ಯ ಹೆಚ್ಚಿದಂತಾಗಿದೆ. ಅತ್ಯಂತ ಸಹನೆಯಿಂದ, ಅಧ್ಯಯನಗಳಿಂದ ಈ ಐತಿಹಾಸಿಕ ತೀರ್ಪು ಹೊರಹೊಮ್ಮಿದೆ ಎಂದು ಅವರು ತಿಳಿಸಿದ್ದಾರೆ.