ಕಾಸರಗೋಡು: ಭಕ್ತರ ಪ್ರೀತಿಯ ಬಬಿಯಾ ಇನ್ನಿಲ್ಲ; ವಿಷ್ಣುಲೋಕದತ್ತ ಪಯಣಿಸಿದ ದೈವಿಕ ಮೊಸಳೆ

ಕಾಸರಗೋಡು: ಇಲ್ಲಿನ ಅನಂತಪುರಂನ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಕೊಳದಲ್ಲಿ ವಾಸವಾಗಿದ್ದ ಭಕ್ತರ ಪ್ರೀತಿಯ ಮೊಸಳೆ ಬಬಿಯಾ ಸಾವನ್ನಪ್ಪಿದೆ. ಸುಮಾರು 75 ವರ್ಷ ವಯಸ್ಸಿನ ಈ ಮೊಸಳೆ ನಿನ್ನೆ ರಾತ್ರಿ ಸಾವನ್ನಪ್ಪಿದೆ. ದಂತಕಥೆಗಳ ಪ್ರಕಾರ, 1945 ರಲ್ಲಿ, ಬ್ರಿಟಿಷ್ ಅಧಿಕಾರಿಯೊಬ್ಬರು ದೇವಾಲಯದಲ್ಲಿ ಮೊಸಳೆಯೊಂದಕ್ಕೆ ಗುಂಡು ಹಾರಿಸಿದ್ದ ಕೆಲವೇ ದಿನಗಳಲ್ಲಿ ಬಬಿಯಾ ದೇವಾಲಯದ ಕೊಳದಲ್ಲಿ ಕಾಣಿಸಿಕೊಂಡಿದ್ದಳು. ಬಬಿಯಾ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದ್ದಳು.

ಬೆಳಿಗ್ಗೆ ಮತ್ತು ಮಧ್ಯಾಹ್ನ ಪ್ರಾರ್ಥನೆಯ ನಂತರ ಆಕೆಗೆ ಆಹಾರವನ್ನು ನೀಡಲಾಗುತ್ತಿತ್ತು. ದೈವಿಕ ಮೊಸಳೆಯಾದ ಬಬಿಯಾಗೆ ನೈವೇದ್ಯವು ಈ ದೇವಾಲಯದ ಮುಖ್ಯ ಅರ್ಪಣೆಯಾಗಿತ್ತು. ಭಕ್ತರು ತಮ್ಮ ಕಾಣಿಕೆಯನ್ನು ಅರ್ಚಕರಿಗೆ ನೀಡಿದ ನಂತರ, ಅರ್ಚಕರು ಕೆರೆಯ ಕಡೆಗೆ ಹೋಗಿ ಕಾಣಿಕೆಯನ್ನು ಬಬಿಯಾಗೆ ನೀಡುತ್ತಿದ್ದರು. ಬಬಿಯಾ ವಿಧೇಯತೆಯಿಂದ ಕೊಳದಿಂದ ಹೊರಬಂದು ಅದನ್ನು ತಿನ್ನುತ್ತಿದ್ದಳು. ಬಬಿಯಾ ಇದುವರೆಗೂ ಕೊಳದಲ್ಲಿ ಯಾರಿಗೂ ಹಾನಿ ಮಾಡಿಲ್ಲ. ಬಬಿಯಾ ಅನಂತಪದ್ಮನಾಭ ದೇವರನ್ನು ಕಾಪಾಡುತ್ತಾಳೆ ಎಂದು ಭಕ್ತರು ನಂಬಿದ್ದರು. ಈ ಅನಂತಪದ್ಮನಾಭಸ್ವಾಮಿ ದೇವಸ್ಥಾನವು ತಿರುವನಂತಪುರಂನಲ್ಲಿರುವ ಶ್ರೀಪದ್ಮನಾಭಸ್ವಾಮಿ ದೇವಾಲಯದ ಮೂಲ ಎಂದು ನಂಬಲಾಗಿದೆ.

ತಮ್ಮ ನೆಚ್ಚಿನ ಬಬಿಯಾ ಸಾವಿಗೆ ಭಕ್ತರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.