ಬಾಬರ್, ಶಕೀಲ್​ ಅರ್ಧಶತಕ; ಹರಿಣಗಳಿಗೆ 271 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದ ಪಾಕಿಸ್ತಾನ : ವಿಶ್ವಕಪ್​ ಕ್ರಿಕೆಟ್​​

ಚೆನ್ನೈ (ತಮಿಳುನಾಡು): ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ತಂಡವು ಬಾಬರ್ ಆಜಂ ಮತ್ತು ಸೌದ್​​ ಶಕೀಲ್​ ಅವರ ಅರ್ಧಶತಕದ ನೆರವಿನಿಂದ 46.3 ಓವರ್​ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 270 ರನ್​ ಗಳಿಸಿತು.ಚೆನ್ನೈನ ಚೆಪಾಕ್​ ಪಿಚ್​​ನಲ್ಲಿ ಇಂದು ತಬ್ರೈಜ್ ಶಮ್ಸಿ ಅವರ ಸ್ಪಿನ್​ ದಾಳಿಯ ನಡುವೆಯೂ ಪಾಕಿಸ್ತಾನ ಹರಿಣಗಳಿಗೆ 271 ರನ್​ ಗುರಿ ನೀಡಿತು.

ಮೈದಾನಕ್ಕಿಳಿದ ಪಾಕ್​ ಆರಂಭಿಕರಿಗೆ ಮಾರ್ಕೊ ಜಾನ್ಸೆನ್ ಕಾಡಿದರು. ಕಳೆದೆರಡು ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್​ ಆಡಿದ್ದ ಅಬ್ದುಲ್ಲಾ ಶಫೀಕ್ ಕೇವಲ 9 ರನ್​ಗೆ ವಿಕೆಟ್​ ಕೊಟ್ಟರು. ಅವರ ಬೆನ್ನಲ್ಲೇ ಜಾನ್ಸೆನ್​ ಇಮಾಮ್-ಉಲ್-ಹಕ್ (12) ಅವರ ವಿಕೆಟ್ ಕಿತ್ತರು. ಮೂರನೇ ವಿಕೆಟ್​ಗೆ ಜೊತೆಯಾದ ನಾಯಕ ಬಾಬರ್​ ಆಜಂ​ ಒಂದು ಬದಿಯಲ್ಲಿ ವಿಕೆಟ್​ ನಿಲ್ಲಿಸಿದರಾದರೂ, ಅವರಿಗೆ ಯಾರೂ ಸಾಥ್​ ಕೊಡಲಿಲ್ಲ. ಮೊಹಮ್ಮದ್ ರಿಜ್ವಾನ್ (31​) ಮತ್ತು ಇಫ್ತಿಕರ್ ಅಹ್ಮದ್ (21) ನಾಯಕನೊಂದಿಗೆ ಕ್ರಮವಾಗಿ 48 ಮತ್ತು 43 ರನ್​ಗಳ ಜೊತೆಯಾಟವಾಡಿ ವಿಕೆಟ್​ ಕೊಟ್ಟರು.

ಟಾಸ್​ ಗೆದ್ದ ಪಾಕ್ ನಾಯಕ ಬಾಬರ್​ ಆಜಂ​ ಮೊದಲು ಬ್ಯಾಟಿಂಗ್​ ಮಾಡುವ ನಿರ್ಧಾರ ಕೈಗೊಂಡರು. ಈಗಾಗಲೇ ಗೆದ್ದ ನಾಲ್ಕು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್​ ಮಾಡಿತ್ತು. ನೆದರ್ಲೆಂಡ್ಸ್‌​ ವಿರುದ್ಧ ಎರಡನೇ ಬ್ಯಾಟಿಂಗ್​ ವೇಳೆ ಸೋಲನುಭವಿಸಿತ್ತು. ಬಾಬರ್ ಇದೇ ಲೆಕ್ಕಾಚಾರ ಹಾಕಿಕೊಂಡಂತೆ​ ಕಾಣುತ್ತಿದೆ. ಅಲ್ಲದೇ ಚೆನ್ನೈ ಸ್ಪಿನ್​ ಪಿಚ್​ನಲ್ಲಿ ಚಂದ್ರನ ಬೆಳಕಿನಡಿಯಲ್ಲಿ ಗೆದ್ದು ಪ್ಲೇ ಆಫ್​ ಜೀವಂತವಾಗಿ ಉಳಿಸಿಕೊಳ್ಳುವ ಚಿಂತನೆ ತಂಡದ್ದಾಗಿದೆ.

ಶತಕ ಕಾಣದ ಬಾಬರ್​: ಪಾಕಿಸ್ತಾನ ನಾಯಕ ಬಾಬರ್​ ತವರಿನಲ್ಲಿ ನಡೆದ ದ್ವಿಪಕ್ಷೀಯ ಸರಣಿಗಳಲ್ಲಿ ಸತತ ಶತಕಗಳ ಮೂಲಕ ದಾಖಲೆ ಮಾಡುತ್ತಿದ್ದರು. ಆದರೆ ಏಷ್ಯಾಕಪ್​ ಮತ್ತು ವಿಶ್ವಕಪ್‌​ನಂತಹ ಮಹತ್ವದ ಟೂರ್ನಿಯಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಎದುರು ಪಿಚ್​ಗೆ ಹೊಂದಿಕೊಂಡು ಇನ್ನಿಂಗ್ಸ್​ ಕಟ್ಟುತ್ತಿದ್ದ ಅವರು ಅರ್ಧಶತಕವಾದ ಕೂಡಲೇ ವಿಕೆಟ್​ ಕಳೆದುಕೊಂಡರು. ಇನ್ನಿಂಗ್ಸ್​ನಲ್ಲಿ 65 ಬಾಲ್​ ಎದುರಿಸಿ 4 ಬೌಂಡರಿ ಮತ್ತು 1 ಸಿಕ್ಸ್​ನಿಂದ 50 ರನ್​ ಕಲೆಹಾಕಿದರು.

ಚೆನ್ನೈನ ಸ್ಪಿನ್​ ಪಿಚ್​ ಸಲುವಾಗಿ ತಂಡಕ್ಕೆ ಸೇರ್ಪಡೆಯಾದ ತಬ್ರೈಜ್ ಶಮ್ಸಿ ಬೆಸ್ಟ್​ ಸ್ಪೆಲ್​ ಮಾಡಿದರು. ಪಾಕ್​ನ ಪ್ರಮುಖ ನಾಲ್ಕು ವಿಕೆಟ್​ ಶಮ್ಸಿ ಪಾಲಾದರೆ, ಮಾರ್ಕೊ ಜಾನ್ಸೆನ್ 3, ಮಾರ್ಕೊ ಜಾನ್ಸೆನ್ 2 ಮತ್ತು ಲುಂಗಿ ಎನ್​ಗಿಡಿ 1 ವಿಕೆಟ್​ ಪಡೆದರು.ಶಕೀಲ್​, ಶಾಬಾದ್​​ ಜೊತೆಯಾಟ: 6ನೇ ವಿಕೆಟ್​ಗೆ ಒಂದಾದ ಸೌದ್ ಶಕೀಲ್ ಮತ್ತು ಶಾದಾಬ್ ಖಾನ್ ಜೋಡಿ ತಂಡಕ್ಕೆ ಕೆಳ ಕ್ರಮಾಂಕದಲ್ಲಿ ಆಸರೆಯಾದರು. ಈ ಜೋಡಿ 6ನೇ ವಿಕೆಟ್​ಗೆ 84 ರನ್​ಗಳ ಜೊತೆಯಾಟ ಮಾಡಿತು. ವೇಗವಾಗಿ ಇನ್ನಿಂಗ್ಸ್​ ಕಟ್ಟುತ್ತಿದ್ದ ಶಾಬಾದ್​ ಖಾನ್​ 43 ರನ್​ ಗಳಿಸಿದ್ದಾಗ ವಿಕೆಟ್​ ಕೊಟ್ಟರು. ಶಾಬಾದ್​ ವಿಕೆಟ್​ ಬೆನ್ನಲ್ಲೇ, ಅರ್ಧಶತಕ ಗಳಿಸಿದ್ದ ಸೌದ್ ಶಕೀಲ್ (52) ಸಹ ಔಟ್​ ಆದರು. ಮೊಹಮ್ಮದ್ ನವಾಜ್ ಕೊನೆಯಲ್ಲಿ ಇನ್ನಿಂಗ್ಸ್​ ಕಟ್ಟಲಿಲ್ಲ. ಬಾಲಂಗೋಚಿಗಳು ಕ್ರಿಸ್​ಗೆ ಬಂದು ಪೆವಿಲಿಯನ್​ಗೆ ಮರಳಿದರು. ಇದರಿಂದ 46.3 ಓವರ್​ಗೆ ಪಾಕಿಸ್ತಾನ ಆಲ್​ಔಟ್​ ಆಯಿತು.