ಏಷ್ಯಾಕಪ್ ಅಬ್ಬರದ ಶತಕದೊಂದಿಗೆ ವಿಶ್ವದಾಖಲೆ ಮುರಿದ ಬಾಬರ್​ ಅಜಂ

ಮುಲ್ತಾನ್​: ಏಷ್ಯಾಕಪ್​ 2023 ಉದ್ಘಾಟನಾ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ ಹೊಸ ದಾಖಲೆಗಳನ್ನು ಬರೆದಿದ್ದಾರೆ.131 ಎಸೆತಗಳಲ್ಲಿ 151 ರನ್​ ಬಾರಿಸಿದ ಬಾಬರ್, 42ನೇ ಓವರ್​ನಲ್ಲಿ ಮೂರಂಕಿ ಮೊತ್ತ ತಲುಪಿದರು. ಇದರೊಂದಿಗೆ​ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಹಾಸಿಂ ಆಮ್ಲ ಅವರ ರೆಕಾರ್ಡ್​ ಬ್ರೇಕ್​ ಮಾಡಿದರು. ಆಮ್ಲ 104 ಏಕದಿನ ಇನ್ನಿಂಗ್ಸ್​ಗಳಿಂದ 19 ಶತಕಗಳನ್ನು ಬಾರಿಸಿದ್ದರು. ಆಮ್ಲ ಬಳಿಕದ ಸ್ಥಾನದಲ್ಲಿ ರನ್​ ಮಷಿನ್​ ವಿರಾಟ್​ ಕೊಹ್ಲಿ (124 ಇನ್ನಿಂಗ್ಸ್​), ಆಸ್ಟ್ರೇಲಿಯಾದ ಡೆವಿಡ್​ ವಾರ್ನರ್​ (139), ಎಬಿಡಿ ವಿಲಿಯರ್ಸ್​ (171) ಹಾಗೂ ರೋಹಿತ್​ ಶರ್ಮಾ (181) ಅವರು ಇದ್ದಾರೆ.

151 ರನ್​ ಬಾರಿಸಿದ ಬಾಬರ್​ 19ನೇ ಶತಕ ಪೂರೈಸಿದರು. ಅಲ್ಲದೇ, ಅತಿ ಕಡಿಮೆ (102) ಇನ್ನಿಂಗ್ಸ್​ಗಳಲ್ಲಿ 19 ಸೆಂಚುರಿ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.ಏಷ್ಯಾಕಪ್ ಕ್ರಿಕೆಟ್​ ಕ್ರಿಕೆಟ್​ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನೇಪಾಳ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ ಪಾಕಿಸ್ತಾನ​ ನಾಯಕ ಬಾಬರ್​ ಅಜಂ ಹಲವು ದಾಖಲೆ ಬರೆದರು

ಜೊತೆಗೆ ಬಾಬರ್​ ಪಾಕ್​ ಪರ ಅತಿಹೆಚ್ಚು ಏಕದಿನ ಶತಕ ಬಾರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್​ ದಿಗ್ಗಜ ಸಯೀದ್​ ಅನ್ವರ್​ 20 ಶತಕಗಳೊಂದಿಗೆ ಅಗ್ರರಾಗಿದ್ದಾರೆ. ಅಲ್ಲದೇ, ಬಾಬರ್​ಗೆ ಇದು ಒಟ್ಟಾರೆ 31ನೇ ಅಂತಾರಾಷ್ಟ್ರೀಯ ಶತಕವಾಗಿದ್ದು, ಜಾವೇದ್​ ಮಿಯಾಂದಾದ್​ ಹಾಗೂ ಸಯೀದ್​ ಅನ್ವರ್​ ಅವರ ದಾಖಲೆ ಸರಿಗಟ್ಟಿದ್ದಾರೆ.

ನೇಪಾಳ ಬಗ್ಗುಬಡಿದ ಪಾಕ್​: ನೇಪಾಳ ವಿರುದ್ಧ ಬಾಬರ್​ ಅಜಂ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್​ ಇಫ್ತಿಕರ್ ಅಹಮದ್​ (109* ರನ್​, 71 ಎಸೆತ) ಕೂಡ ಭರ್ಜರಿ ಶತಕ ದಾಖಲಿಸಿದರು. ಇವರಿಬ್ಬರೂ 5ನೇ ವಿಕೆಟ್​ಗೆ 214 ರನ್​ ಜೊತೆಯಾಟ ಆಡಿದರು. ಇದರೊಂದಿಗೆ ನಿಗದಿತ 50 ಓವರ್​ಗಳಲ್ಲಿ ಪಾಕ್​ 6 ವಿಕೆಟ್​ಗೆ​​ 342 ರನ್​ಗಳ ಬೃಹತ್​ ಮೊತ್ತ ಪೇರಿಸಿತು.

ಬಳಿಕ ಪಾಕಿಸ್ತಾನದ ಮಾರಕ​ ಬೌಲಿಂಗ್​ ದಾಳಿಗೆ ಸಿಲುಕಿದ ನೇಪಾಳ ತಂಡ 23.4 ಓವರ್​ಗಳಲ್ಲಿ 104 ರನ್​ಗಳಿಗೆ ಆಲೌಟ್​ ಆಯಿತು. ಪಾಕ್​ 238 ರನ್​ಗಳ ಅಮೋಘ ಜಯದೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕ್​ ಪರ ಶದಾಬ್​ ಖಾನ್​ 4, ಶಾಹಿನ್​ ಅಫ್ರಿದಿ ಹಾಗೂ ಹ್ಯಾರಿಸ್​ ರೌಫ್​ ತಲಾ ಎರಡು ವಿಕೆಟ್​ ಕಬಳಿಸಿದರು. (IANS)ಎರಡನೇ ದೊಡ್ಡ ಇನ್ನಿಂಗ್ಸ್​: ಏಷ್ಯಾಕಪ್​ನಲ್ಲಿ ಬಾಬರ್​ (151) ಎರಡನೇ ಅತಿದೊಡ್ಡ ಇನ್ನಿಂಗ್ಸ್​ ಆಡಿದ ದಾಖಲೆ ಪಡೆದರು. ಇದಕ್ಕೂ ಮುನ್ನ 2012ರಲ್ಲಿ ಶ್ರೀಲಂಕಾ ವಿರುದ್ಧ ಭಾರತದ ವಿರಾಟ್​ ಕೊಹ್ಲಿ ಗಳಿಸಿದ್ದ ಅಜೇಯ 183 ರನ್​ ಅಗ್ರ ಸ್ಥಾನದಲ್ಲಿದೆ. ಪಾಕ್​ ಪರ ಬಾಬರ್​ ಅಜಂ ಅವರ ಈ ಶತಕವೇ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ. ನಂತರ ಸ್ಥಾನದಲ್ಲಿ ​​ಯೂನಿಸ್​ ಖಾನ್​ (144 ರನ್​) ಇದ್ದಾರೆ.