ಉಡುಪಿ : ಅಮೋಘ (ರಿ.) ಹಿರಿಯಡಕ ಹಾಗೂ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನಾಡಿನ ಖ್ಯಾತ ಕವಿ ಬಿ.ಆರ್.ಲಕ್ಷ್ಮಣ್‍ರಾವ್ ಅವರೊಂದಿಗೆ ಆತ್ಮೀಯ ಸಂವಾದ ಕಾವ್ಯ-ಗಾನ-ಕುಂಚ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಹಿರಿಯ ಕವಿ ಬಿ.ಆರ್.ಲಕ್ಷ್ಮಣ್ ರಾವ್ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಪ್ರತಿಯೊಬ್ಬ ಮನುಷ್ಯನಿಗೂ ಹೊರಬಾಳು ಮತ್ತು ಒಳಬಾಳು ಎಂಬುದು ಇರುತ್ತದೆ. ಹೊರಬಾಳಿಗೆ ಉದ್ಯೋಗ, ಸಂಪಾದನೆ, ಮನೆ, ಆಸ್ತಿ-ಪಾಸ್ತಿ ಮೊದಲಾದವು ಮುಖ್ಯವಾಗುತ್ತವೆ. ಕೇವಲ ಇದರಿಂದಷ್ಟೇ ವ್ಯಕ್ತಿ ಸಂತೋಷ ಪಡೆಯಲು ಸಾಧ್ಯವಿಲ್ಲ. ನಿಜವಾದ ಸಂತೋಷ, ಆತ್ಮಾನಂದ, ನೆಮ್ಮದಿ, ಧನ್ಯತಾ ಭಾವ, ಸಾರ್ಥಕತೆ ಸಿಗುವುದು ಕಲೆಗಳಿಂದ, ಸಾಹಿತ್ಯದಿಂದ. ನಾಗರಿಕತೆ ಹೊರಗಿನದು ಸಂಸ್ಕøತಿ ಒಳಗಿನದು. ಇಂತಹ ಸಾಂಸ್ಕøತಿಕ ಶ್ರೀಮಂತಿಕೆಯುಳ್ಳ ಕರಾವಳಿಯ ಕನ್ನಡ ವಾತಾವರಣವನ್ನು ಕಂಡು ಬಹಳ ಸಂತೋಷವಾಗುತ್ತಿದೆ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಸಜಂಗದ್ದೆ ರಾಮಭಟ್, ಕನ್ನಡ ಉಪನ್ಯಾಸಕಿ ನಳಿನಿ, ಇತಿಹಾಸ ಉಪನ್ಯಾಸಕ ಮಂಜುನಾಥ್ ಬಿ.ಡಿ., ವಿದ್ಯಾರ್ಥಿಗಳಾದ ಪ್ರಜ್ಞಾ, ವೆಂಕಟೇಶ್ ನಾಯಕ್, ವಿಶ್ವನಾಥ್ ಹಾಗೂ ಅಮೋಘದ ಸದಸ್ಯರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ನಿಕೇತನ ಅವರು ಹಿರಿಯ ಕವಿ ಬಿ.ಆರ್.ಲಕ್ಷ್ಮಣ್‍ರಾವ್ ಅವರ ಆಗಮನಕ್ಕೆ ಹರ್ಷ ವ್ಯಕ್ತಪಡಿಸಿ, ಕವಿಯ ಕವನವನ್ನು ವಾಚಿಸಿದರು. ಅಮೋಘ (ರಿ.) ಹಿರಿಯಡಕ ಇದರ ನಿರ್ದೇಶಕಿ ಪೂರ್ಣಿಮಾ ಸುರೇಶ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಕಾರ್ಯಕ್ರಮದಲ್ಲಿ ಅಮೋಘ (ರಿ.) ಹಿರಿಯಡಕದ ಕಾರ್ಯದರ್ಶಿ ಸತ್ಯಾನಂದ ನಾಯಕ್, ಅನಿಲ್ ಶೆಟ್ಟಿ, ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಸಾಲ್ಯಾನ್, ಕಾಲೇಜಿನ ಎಲ್ಲಾ ಬೋಧಕರು, ಕಛೇರಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ರವಿಚಂದ್ರ ಬಾಯಿರಿ, ವಿದ್ಯಾರ್ಥಿನಿ ಅನನ್ಯ ಕವಿ ಬಿ.ಆರ್.ಲಕ್ಷ್ಮಣ್‍ರಾವ್ ಅವರ ಕವಿತೆಗಳ ಗಾಯನ ಮಾಡಿದರು. ಕವಿಯ ಭಾವಚಿತ್ರ ವಿದ್ಯಾರ್ಥಿ ಶರಣಬಸವನ ಕುಂಚದಲ್ಲಿ ಮೂಡಿತು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಜಯಾಕೆ.ಎಸ್. ಕವಿಯನ್ನು ಪರಿಚಯಿಸಿದರು. ಆಂಗ್ಲಭಾಷಾ ಸಹಾಯಕ ಪ್ರಾಧ್ಯಾಪಕ ಪ್ರವೀಣ ಶೆಟ್ಟಿ ಸ್ವಾಗತಿಸಿದರು, ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಸುಮನಾ ಬಿ. ನಿರೂಪಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ರಾಘವೇಂದ್ರ ಪಿ.ಕೆ. ವಂದಿಸಿದರು.