ಕಾಂತಾರದ ಮೈನವಿರೇಳಿಸುವ ಹಿನ್ನೆಲೆ ಸಂಗೀತದ ಮಾಂತ್ರಿಕ ಬಿ. ಅಜನೀಶ್ ಲೋಕನಾಥ್: ಕಾಂತಾರ ಯಶಸ್ಸಿನ ಹಿಂದೆ ಜನಪದ ಸಂಗೀತದ ಛಾಪು

ತುಳುನಾಡಿನ ನಂಬಿಕೆ ಮತ್ತು ಆಚರಣೆಗಳನ್ನು ಅತ್ಯಮೋಘವಾಗಿ ಬಿಂಬಿಸಿರುವ ಕಾಂತಾರ ಚಿತ್ರದ ಯಶಸ್ಸಿನ ಹಿಂದೆ ಅದರ ಸಂಗೀತ ಮತ್ತು ಹಿನ್ನೆಲೆ ಸಂಗೀತವೂ ಕೆಲಸ ಮಾಡಿದೆ. ಚಿತ್ರದ ಮನಮೋಹಕ ಹಾಡುಗಳಾಗಿರಲಿ, ಜನ ಕೈ ಮುಗಿಯುತ್ತಿರುವ, ಅಥವಾ ಮೈಮೇಲೆ ಆವೇಶ ಬಂದಂದಾಡುತ್ತಿರುವ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ದೈವಾರಾಧನೆಯ ಹಿನ್ನೆಲೆ ಸಂಗೀತವೆ ಇರಲಿ ಇದರ ಸಂಪೂರ್ಣ ಶ್ರೇಯ ಕನ್ನಡದ ಸಂಗೀತ ಮಾಂತ್ರಿಕ ಬಿ.ಅಜನೀಶ್ ಲೋಕನಾಥ್ ಅವರಿಗೆ ಸಲ್ಲಬೇಕು.

ಕರಾವಳಿಯ ದೈವಾರಾಧನೆಯ, ಭೂತ-ಕೋಲದ ಸಂಸ್ಕೃತಿಯನ್ನು ಹತ್ತಿರದಿಂದ ಕಂಡವರಿಗೆ, ಬಾಲ್ಯದಿಂದಲೂ ಇದನ್ನು ಅನುಭವಿಸಿದವರಿಗೆ ಈ ಹಿನ್ನೆಲೆ ಸಂಗೀತ, ಪಾರಿ ಪಾಡ್ದನಗಳ ಪರಿಚಯವಿರುತ್ತದೆ. ತೆರೆಯ ಮೇಲೆ ಮೈನವಿರೇಳಿಸುವ ಹಿನ್ನೆಲೆ ಸಂಗೀತವನ್ನು ಕಿವಿಗಡಚಿಕ್ಕುವ ಶಬ್ದದಲ್ಲಿ ಕೇಳುವಾಗ ಚಿಕ್ಕಂದಿನಿಂದಲೂ ಕಂಡ, ಅನುಭವಿಸಿದ ದೈವಾರಾಧನೆಯ ಎಲ್ಲಾ ಘಟನೆಗಳೂ ಕಣ್ಣ ಮುಂದೆ ಸುಳಿಯುತ್ತವೆ.

2015 ರಲ್ಲಿ ಉಳಿದವರು ಕಂಡಂತೆ ಚಿತ್ರದ ಕೆಲಸಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿರುವ ಅಜನೀಶ್ ಈ ಬಗ್ಗೆ ಮಾತನಾಡುತ್ತ, ಕಾಂತಾರ ಸಂಸ್ಕೃತಿ ಆಧಾರಿತ, ಜನಪದ ಚಿತ್ರವಾಗಿದೆ. ಈ ಹಿಂದೆ ಇದೇ ರೀತಿಯ ಚಿತ್ರಕಥೆಯಾಧಾರಿತ ರಂಗಿತರಂಗ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದರೂ, ಕಾಂತಾರ ಸಂಗೀತವು ಇತರ ಚಿತ್ರಗಳಿಗಿಂತ ಭಿನ್ನವಾಗಿದೆ ಎನ್ನುತ್ತಾರೆ.

ಕೃಪೆ:ಸಿನಿಮಾ ಎಕ್ಸ್ ಪ್ರೆಸ್

ರಿಷಬ್ ಶೆಟ್ಟಿ ಅವರ ಈ ಚಿತ್ರದ ಸಂಗೀತ ತುಂಬಾ ಆಳವಾಗಿದೆ. ನಾವು 30 ರಿಂದ 40 ಸಂಗೀತಗಾರರನ್ನು ಒಟ್ಟುಗೂಡಿಸಿದ್ದೆವು. ಒಂದು ಗುಂಪಿನಲ್ಲಿ ಸುಮಾರು 10 ಮಂದಿ ಇದ್ದರು. ಕುಂದಾಪುರ ಮತ್ತು ಸುತ್ತಮುತ್ತ ವಾಸಿಸುವ ಜನರನ್ನೆ ಇದಕ್ಕಾಗಿ ಬಳಸಿದ್ದೆವು. ನಾವು ಕನಿಷ್ಠ 40 ಗಂಟೆಗಳ ರೆಕಾರ್ಡಿಂಗ್ ಅನ್ನು ಪಡೆದುಕೊಂಡಿದ್ದೇವೆ ಮತ್ತು ಇದನ್ನು ಹೆಚ್ಚಾಗಿ ಹಿನ್ನೆಲೆ ಸಂಗೀತವಾಗಿ ಬಳಸಿದ್ದೇವೆ. ಚಿತ್ರದ ಅಡಿಬರಹ ದಂತಕಥೆ ಎಂದಾಗಿತ್ತು. ಇದರರ್ಥ ಇದು ಪೌರಾಣಿಕ ಕಥೆ, ಆದ್ದರಿಂದ ನಾವು 90 ರ ದಶಕದ ಸಂಸ್ಕೃತಿಯ ಬೇರುಗಳನ್ನು ಕಂಡುಕೊಳ್ಳಬೇಕಾಗಿತ್ತು. ಪ್ರಯೋಗಕ್ಕೆ ಅಪಾರ ಅವಕಾಶವಿರುವುದರಿಂದ ಹಾಡುಗಳಿಗಿಂತ ಹಿನ್ನೆಲೆ ಸಂಗೀತವೆ ನನ್ನನ್ನು ಹೆಚ್ಚು ಪ್ರಚೋದಿಸಿತು ಎಂದು ಅವರು ಹೇಳುತ್ತಾರೆ.

ಕಾಂತಾರ ತಂಡ ಜಾನಪದ ಸಂಗೀತದ ಬಗ್ಗೆ ಆಳವಾದ ಜ್ಞಾನ ಹೊಂದಿರುವ ಮೈಮ್ ರಾಮದಾಸ್ ಅವರಿಂದ ಮಾರ್ಗದರ್ಶನ ಪಡೆದಿದೆ. ಚಿತ್ರದಲ್ಲಿ ಬಹುಮುಖಿ ಕಲೆಯಾದ ದೈವಾರಾಧನೆಯನ್ನು ಅಳವಡಿಸಲಾಗಿದ್ದು, ಜನಪದ ಹಾಡುಗಳು ಮತ್ತು ಸಾಂಪ್ರದಾಯಿಕ ವಾದ್ಯಗಳನ್ನು ಬಳಸಿಕೊಂಡು ಜಾನಪದ ಸಂಗೀತವನ್ನು ಸಹ ಪ್ರತಿನಿಧಿಸಲಾಗಿದೆ. ಸಾಮಾನ್ಯವಾಗಿ ಸುಗ್ಗಿಯ ಸಮಯದಲ್ಲಿ ಇಲ್ಲಿನ ಜನರು ಹಾಡುವ ಹಾಡುಗಳು ಮತ್ತು ಆದಿವಾಸಿಗಳಲ್ಲಿ ಜನಪ್ರಿಯವಾಗಿದ್ದ ಹಾಡುಗಳನ್ನು ಆಲ್ಬಂನ ಭಾಗವಾಗಿ ಮತ್ತು ಹಿನ್ನೆಲೆ ಸಂಗೀತವಾಗಿ ಬಳಸಲಾಗಿದೆ ಎನ್ನುತ್ತಾರೆ ಅಜನೀಶ್.

ದೂರದ ಭದ್ರಾವತಿಯಲ್ಲಿ ಜನಿಸಿದ 36 ರ ಹರೆಯದ ಅಜನೀಶ್ ತುಳುವ ನಾಡಿನ ಅಪ್ಪಟ ಮಣ್ಣಿನ ಸೊಗಡಿನ ದೈವಾರಾಧನೆಯ ಸಂಗೀತದ ಸೊಬಗನ್ನು ಈ ಪರಿಯಲ್ಲಿ ಜನರಿಗೆ ಮುಟ್ಟಿಸಿರುವುದು ಸಾಮಾನ್ಯ ಸಾಧನೆಯಲ್ಲ. ರಂಗಿತರಂಗ, ಕಿರಿಕ್ ಪಾರ್ಟಿ, ಉಳಿದವರು ಕಂಡಂತೆ, ಅವನೆ ಶ್ರೀಮನ್ನಾರಾಯಣ, ಗುರು ಶಿಷ್ಯರು, ವಿಕ್ರಾಂತ್ ರೋಣ ಮುಂತಾದ ಚಲನಚಿತ್ರಗಳಲ್ಲಿ ಅಜನೀಶ್ ಸಂಗೀತಕ್ಕೆ ಅಭಿಮಾನಿಗಳು ತಲೆದೂಗಿದ್ದರೆ, ಈ ಬಾರಿ ಕಾಂತಾರ ಸಂಗೀತಕ್ಕೆ ಕೈ ಎತ್ತಿ ಮುಗಿಯುತ್ತಿದ್ದಾರೆ. ಇದು ಆ ದೈವಕೃಪೆಯಲ್ಲದೆ ಬೇರೇನಾಗಿರಲು ಸಾಧ್ಯ?