ಉಡುಪಿ: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಗೆ ಸಂಬಂಧಿಸಿದಂತೆ ಆರೋಗ್ಯ ಕಾರ್ಡ್ಗಳನ್ನು ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ, ತಾಲೂಕು ಆಸ್ಪತ್ರೆ ಕುಂದಾಪುರ ಹಾಗೂ ಕಾರ್ಕಳ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಾದ ಹೆಬ್ರಿ, ನಿಟ್ಟೆ, ಬ್ರಹ್ಮಾವರ, ಕೋಟ, ಶಿರ್ವ, ಬೈಂದೂರುಗಳಲ್ಲಿ ಮಾತ್ರವಲ್ಲದೇ ಕರ್ನಾಟಕ ಒನ್ ಸೆಂಟರ್ ಹಾಗೂ ಜಿಲ್ಲೆಯಲ್ಲಿರುವ ಸೇವಾ ಸೆಂಟರ್ಗಳಲ್ಲಿ ಪಡೆಯಬಹುದು. ಮಾತ್ರವಲ್ಲದೇ ಈ ಮೇಲಿನ ಕೇಂದ್ರಗಳು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆದು ಇತರ ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಿ ಸಂಬಂಧಪಟ್ಟ ಕಾರ್ಡ್ಗಳನ್ನು ಸಾರ್ವಜನಿಕರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
ಕಾರ್ಡ್ಗಳನ್ನು ವಿತರಿಸುವ ಕಾರ್ಯಕ್ರಮ ನಡೆಸುವಾಗ ಪೇಪರ್ನಲ್ಲಿ ಕಾರ್ಡ್ನ್ನು ನೀಡುವುದಾದರೆ ಕೇವಲ 10 ರೂ. ಮಾತ್ರ ಹಾಗೂ ಪ್ಲಾಸ್ಟಿಕ್ ಕಾರ್ಡ್ ನೀಡುವುದಾದರೆ ಕಾರ್ಡ್ ಒಂದಕ್ಕೆ ಕೇವಲ 35 ರೂ. ಮಾತ್ರ ಫಲಾನುಭವಿಗಳಿಂದ ಪಡೆಯಬಹುದು.
ಪ್ರತಿ ಕಾರ್ಡ್ಗೆ ಫಲಾನುಭವಿಗಳು ನೀಡಬೇಕಾದ ಮೊಬಲಗಿನ ಬಗ್ಗೆ ಪ್ರತೀ ಶಿಬಿರಗಳಲ್ಲಿ 5*4 ಅಡಿಯ ಬ್ಯಾನರ್ನಲ್ಲಿ ಪ್ರದರ್ಶಿಸಬೇಕು. ಅಲ್ಲದೇ ಯಾವುದೇ ಗ್ರಾಮ ಪಂಚಾಯತ್ಗಳು ತಮ್ಮ ವ್ಯಾಪ್ತಿಯಲ್ಲಿ ಕಾರ್ಡ್ ವಿತರಿಸುವ ಕಾರ್ಯವನ್ನು ತಮಗೆ ಹತ್ತಿರವಿರುವ ಸೇವಾ ಸಿಂಧು ಕೇಂದ್ರಗಳು ಇಲ್ಲವೇ ಕರ್ನಾಟಕ ಒನ್ ಸೆಂಟರ್ಗಳ ಸಮನ್ವಯದೊಂದಿಗೆ ಮೇಲಿನ ಷರತ್ತುಗಳನ್ನು ಪಾಲಿಸಿ ಮಾಡಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.