ಮನುಷ್ಯ ದೀರ್ಘಾಯುಷಿಯಾಗಿರಲು ಬೇಕಾಗಿರುವ ಜ್ಞಾನವನ್ನು ಒದಗಿಸುವ ಆಯುರ್ವೇದ

ಆಯುಸ್ + ವೇದ ಈ ಎರಡು ಶಬ್ದಗಳಿಂದ ಉತ್ಪತ್ತಿಯಾಗಿರುವುದು ಆಯುರ್ವೇದ. ಆಯುಸ್ ಎಂದರೆ ದೀರ್ಘಾಯುಷ್ಯ, ವೇದ ಅಂದರೆ ಜ್ಞಾನ. ಮನುಷ್ಯ ದೀರ್ಘಾಯುಷಿಯಾಗಿರಲು ಬೇಕಾಗಿರುವ ಜ್ಞಾನವನ್ನು ಒದಗಿಸುವುದು ಆಯುರ್ವೇದ.ಆಯುರ್ವೇದ ಅಮೃತ ಕೇಂದ್ರದ ಸುಧಾರಿತ ಸಂಶೋಧನೆಯ ಸಂಶೋಧನಾ ನಿರ್ದೇಶಕರಾದ ಡಾ.ಪಿ.ರಾಮ್ ಮನೋಹರ್ ‘ಭಾರತೀಯ ಮನೋವಿಜ್ಞಾನ- ಆಯುರ್ವೇದದ ದೃಷ್ಟಿಕೋನ’ ಈ ಕುರಿತು ಒಂದು ಉಪನ್ಯಾಸವನ್ನು ನೀಡಿದ್ದಾರೆ. ಆಯುರ್ವೇದ ಮತ್ತು ಮನೋವಿಜ್ಞಾನ ಹೇಗೆ ದೇಹ ಮತ್ತು ಆತ್ಮದಂತೆ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದನ್ನು ಈ ಉಪನ್ಯಾಸದಲ್ಲಿ ವಿವರಿಸಿದ್ದಾರೆ. ಆಯುರ್ವೇದ ಎನ್ನುವುದು ಜೀವ ವಿಜ್ಞಾನ. ಸಾವು ಎನ್ನುವುದು ನಿಶ್ಚಿತ, ಸಾವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಸಾವನ್ನು ವಿಳಂಬವಾಗಿಸಿ ಸುಧೀರ್ಘ ಜೀವನವನ್ನು ಪಡೆಯಲು ನಾವು ಏನು ಮಾಡಬಹುದೆನ್ನುವುದನ್ನು ಆಯುರ್ವೇದ ತಿಳಿಸಿಕೊಡುತ್ತದೆ. ಪರಿಪೂರ್ಣ ಆನಂದವನ್ನು ಹೊಂದಿ ಜೀವನ ಸಾರ್ಥಕ್ಯವನ್ನು ಪಡೆಯಲು ಆಯುರ್ವೇದ ಸಹಕರಿಸುತ್ತದೆ. ನಮ್ಮ ಸುತ್ತುಮುತ್ತಲಿನ ಪರಿಸರದ ಜೊತೆ ಹೊಂದಾಣಿಕೆ ಮಾಡಿಕೊಂಡು ಸ್ವಯಂ ಸಂರಕ್ಷಣೆ ಮಾಡುವುದನ್ನು ಆಯುರ್ವೇದ ನಮಗೆ ಕಲಿಸಿಕೊಡುತ್ತದೆ. ಆಯುರ್ವೇದವೆಂದರೆ ಕೇವಲ ಮರ- ಗಿಡ, ಸೊಪ್ಪು- ತರಕಾರಿ ಮಾತ್ರವಲ್ಲ, ಸೂರ್ಯನಡಿ ಇರುವ ಪ್ರತಿಯೊಂದು ವಸ್ತುವೂ ಔಷಧವೆ. ಸಾರಾಸಗಟಗಾಗಿ ಎತ್ತಿ ಒಗೆದು ಹಾಕಬಹುದಾದ ಯಾವ ವಸ್ತುವೂ ಭೂಮಿಯ ಮೇಲಿಲ್ಲ. ಆಯುರ್ವೇದದಲ್ಲಿ ಎಲ್ಲವೂ ಒಳ್ಳೆಯದು ಮತ್ತು ಎಲ್ಲವೂ ಕೆಟ್ಟದ್ದೆ. ಆಯುರ್ವೇದ ಯಾವುದನ್ನೂ ಇದು ಹೀಗೇ ಎಂದು ನಿರ್ದೇಶಿಸುವುದಿಲ್ಲ. ಆಯಾ ವ್ಯಕ್ತಿ, ಕಾಲ, ದೇಶ, ಪರಿಸ್ಥಿತಿಗನುಗುಣವಾಗಿ ಒಳ್ಳೆಯದು ಮತ್ತು ಕೆಟ್ಟದ್ದು ನಿರ್ಧಾರಿತವಾಗುತ್ತದೆ. ಆಹಾರವನ್ನು ಸೇವಿಸುವುದೂ ಕೂಡಾ ಒಂದು ಯಜ್ಞ. ದೇಹ ಮತ್ತು ಮನಸ್ಸು ಪಾತ್ರೆ ಮತ್ತು ತುಪ್ಪದಂತೆ, ದೇಹವು ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಮನುಷ್ಯನ ಎಲ್ಲಾ ಕಾಯಿಲೆಗಳು ಮನಸ್ಸಿನಲ್ಲಿ ಹುಟ್ಟಿಕೊಳ್ಳುತ್ತವೆ, ಆದ್ದರಿಂದ ಮೊದಲು ಮನಸ್ಸಿನ ಮಟ್ಟದಲ್ಲಿ ಕೆಲಸ ಮಾಡಬೇಕು. ಮನಸ್ಸಿಗೆ ಯಾವುದು ಹಿತವನ್ನು ನೀಡುತ್ತದೆಯೋ, ಯಾವುದು ನಮಗೆ ಪ್ರಿಯವಾದುದಾಗಿದೆಯೋ ಅದನ್ನು ಸೇವಿಸಬೇಕು. ಮನಸ್ಸು ಆಹಾರದಿಂದ ಮಾಡಲ್ಪಟ್ಟಿದೆ ಆದ್ದರಿಂದ ಆಹಾರದ ವಿಷಯದಲ್ಲಿ ಜಾಗರೂಕರಾಗಿರಿ ಎನ್ನುತ್ತಾರೆ ಇವರು.ಆಯುರ್ವೇದ ಎಂದರೆ ಕೇವಲ ಸಸ್ಯಾಹಾರ ಮಾತ್ರ ಎಂದೂ ಅರ್ಥವಲ್ಲ. ದೇಹಕ್ಕೆ ಚೈತನ್ಯ ನೀಡಲು, ದೇಹವನ್ನು ಸಮತೋಲನ ಸ್ಥಿತಿಯಲ್ಲಿಡಲು ಏನೆಲ್ಲಾ ಅವಶ್ಯಕವೋ ಅದೆಲ್ಲವನ್ನೂ ನಾವು ತಿನ್ನಬೇಕು. ಯಾವ ಬೆಳ್ಳುಳ್ಳಿಯನ್ನು ತಾಮಸಿಕ ಎಂದು ಜನರು ತಿಳಿದಿದ್ದಾರೋ ಆ ಬೆಳ್ಳುಳ್ಳಿಯು ಆಯುರ್ವೇದದಲ್ಲಿ ‘ಸೂಪರ್ ಫುಡ್’ ಎನಿಸಿಕೊಂಡಿದೆ! ಸಾತ್ವಿಕ ಆಹಾರವೆಂದರೆ ಕೇವಲ ಸೊಪ್ಪು ಸದೆ ತಿನ್ನಿವುದಲ್ಲ. ಯಾವುದೇ ಒಂದು ಆಹಾರವನ್ನು ತಯಾರಿಸಿದ ಮೂರು ಘಂಟೆಯೊಳಗೆ ಸೇವಿಸಿದರೆ ಅದು ಸಾತ್ವಿಕ, ಇಲ್ಲವಾದರೆ ಅದು ತಾಮಸಿಕ ಆಹಾರ ಎನಿಸಿಕೊಳ್ಳುತ್ತದೆ. ಯಾವ ಆಹಾರವನ್ನು ತಿನ್ನುತ್ತೇವೆ ಎನ್ನುವುದು ಎಷ್ಟು ಮುಖ್ಯವೋ ಅದನ್ನು ಯಾವ ಸಮಯದಲ್ಲಿ ತಿನ್ನುತ್ತೇವೆ ಅನ್ನುವುದೂ ಮುಖ್ಯ.

ಸಸ್ಯಗಳು ಆಹಾರದ ಪ್ರಾಥಮಿಕ ಚಯಾಪಚಯಕಾರಕಗಳು. ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿ ಶಕ್ತಿ ಸಂಚಯನ ಮಾಡುತ್ತವೆ. ಇದನ್ನೇ ಓಷ+ಧೀ= ಔಷಧೀ ಎನ್ನುತ್ತಾರೆ. ವನಸ್ಪತಿ ಎಂದರೆ ಮದ್ದಿನ ಗಿಡಗಳು. ‘ಔಷಧಿಯೋಭ್ಯೋ ಅನ್ನಮ್’ , ಆಹಾರವೆ ಔಷಧಿ. ನೀವು ಏನನ್ನು ತಿನ್ನುತ್ತೀರೋ ಅದನ್ನು ನೀವು ಜೀರ್ಣಿಸಿಕೊಳ್ಳಬಲ್ಲಿರಾದರೆ ನೀವು ಏನನ್ನು ಬೇಕಾದರೂ ತಿನ್ನಬಹುದು. ಆದರೆ ಹೀಗೆ ತಿನ್ನಲ್ಪಡುವುದು ಮನಸ್ಸಿಗೆ ಹಿತವನ್ನೂ, ಪ್ರೀತಿಯನ್ನೂ ಉಂಟುಮಾಡುವಂತದ್ದಾಗಿರಬೇಕು. ಆಯುರ್ವೇದದಲ್ಲಿ ‘ಪಥ್ಯ’ ಎಂದರೆ ಜೀರ್ಣವಾಗುವಂತಹ ಅಥವಾ ಚಯಾಪಚಯ ಮಾಡಬಹುದಾದ ಆಹಾರ ಎಂದರ್ಥ. ಪಥ್ಯದ ಹೆಸರಿನಲ್ಲಿ ರೋಗಿಗೆ ಮಾನಸಿಕ ಕಿರಿಕಿರಿ ಉಂಟುಮಾಡುವುದು ಆಯುರ್ವೇದದ ಗುರಿಯಲ್ಲ. ಒಬ್ಬ ಆಯುರ್ವೇದ ವೈದ್ಯನಾದವನು ಮೊದಲು ರೋಗಿಯ ಮನಸ್ಸಿನ ಒಳಹೊಕ್ಕು ನೋಡಬೇಕು. ರೋಗಿಯ ಮನಸ್ಸಿನಲ್ಲಿರುವ ಭಾವನೆಗಳನ್ನು ಅರ್ಥಮಾಡಿಕೊಂಡರೆ ರೋಗ ಅರ್ಧವಾಸಿ ಗುಣವಾದಂತೆ. ಮಾನಸಿಕ ರೋಗಿಗಳಲ್ಲಿ ನಿಜವಾಗಿಯೂ ಚಿಕಿತ್ಸೆಯ ಅವಶ್ಯಕತೆ ಇರುವುದು ರೋಗಿಗಲ್ಲ, ಬದಲಿಗೆ ಸಮಾಜಕ್ಕೆ ಎನ್ನುವ ಇವರು, ತ್ರಿದೋಷ ಎಂದರೆ ಕೇವಲ ವಾತ, ಪಿತ್ಥ, ಕಫ ಶರೀರ ಎಂದರ್ಥವಲ್ಲ. ವಾತ ಎಂದರೆ ನರವಿಜ್ಞಾನ, ಪಿತ್ಥ ಎಂದರೆ ಅಂತಃಸ್ರಾವ ಸಂಬಂಧಿತ ಮತ್ತು ಕಫ ಎಂದರೆ ರೋಗನಿರೋಧಕ ಶಕ್ತಿಗೆ ಸಂಬಂಧಿಸಿದ ಎಂದು ಅರ್ಥ. ಎಲ್ಲರ ದೇಹವೂ ಕಾರ್ಯನಿರ್ವಹಿಸುವ ರೀತಿ ಒಂದೇ ಆಗಿದೆ ಅದರೆ ಪ್ರತಿಯೊಬ್ಬರ ಪ್ರಕೃತಿಯು ಭಿನ್ನವಾಗಿದೆ. ಮನುಷ್ಯನ ಶರೀರವು ವಿಭಿನ್ನ ಪ್ರಕೃತಿಗಳಿಂದ ಸಂಯೋಜಿಸಲ್ಪಟ್ಟಿದೆ. ಈ ಸಂಯೋಜನೆಯನ್ನು ಜಾತಿ ಪ್ರಕೃತಿ(ಜನಾಂಗ), ಕುಲ ಪ್ರಕೃತಿ(ಕೌಟುಂಬಿಕ ಹಿನ್ನೆಲೆ), ದೇಶ ಪ್ರಕೃತಿ (ಭೌಗೋಳಿಕ ಹಿನ್ನೆಲೆ), ಕಾಲ ಪ್ರಕೃತಿ( ಋತುಮಾನ), ದೇಹ ಪ್ರಕೃತಿ ಮತ್ತು ಸತ್ವ ಪ್ರಕೃತಿ ಎಂದು ವಿಂಗಡಿಸಲಾಗಿದೆ ಇವೆಲ್ಲವನ್ನು ಅರಿತು ರೋಗಕ್ಕೆ ಚಿಕಿತ್ಸೆ ನೀಡಬೇಕು ಎಂದು ತಮ್ಮ ಉಪನ್ಯಾಸದಲ್ಲಿ ವಿವರಿಸಿದ್ದಾರೆ.

ಆರೋಗ್ಯವಂತರಾಗಿರುವುದಕ್ಕೆ ಆಹಾರ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ನಿದ್ದೆ. ವ್ಯಕ್ತಿಯ ದೇಹ ಮತ್ತು ಮನಸ್ಸು ಏಕಕಾಲದಲ್ಲಿ ವಿಶ್ರಾಂತಿ ಪಡೆಯುವುದು ನಿದ್ದೆಯಲ್ಲಿ. ಈ ಸಮಯದಲ್ಲಿ ಶರೀರ ಸ್ವಯಂ ಚಿಕಿತ್ಸೆಯನ್ನು ಮಾಡುತ್ತಿರುತ್ತದೆ. ದೇಹದ ಅವಯವಗಳೆಲ್ಲಾ ವಿಶ್ರಾಂತ ಸ್ಥಿತಿಯಲ್ಲಿರುತ್ತವೆ. ನಿದ್ದೆಯೂ ಧ್ಯಾನದ ಒಂದು ರೂಪವೆ. ಮನಸ್ಸು ಇಹಪರದ ಜಂಜಡವಿಲ್ಲದೆ ತನ್ನಲ್ಲಿ ತಾನು ಲೀನವಾಗುವುದು ಧ್ಯಾನ, ಅದು ನಿದ್ದೆಯೂ ಹೌದು. ಧ್ಯಾನ ಮಾಡಲು ಇಚ್ಚೆ ಇರುವುವವರು ಮೊದಲು ಸರಿಯಾಗಿ ನಿದ್ದೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಿದ್ದೆ, ಮನಸ್ಸು ಮತ್ತು ಶರೀರ ಇದು ಒಂದಕ್ಕೊಂದು ಪೂರಕ. ವ್ಯಕ್ತಿಯು ಕಾಳಿ ಯಮ( ರಾತ್ರಿ 10ರಿಂದ ಬೆಳಗ್ಗೆ 2 ಘಂಟೆ) ದಲ್ಲಿ ನಿದ್ದೆ ಮಾಡಬೇಕು. ಈ ಸಮಯದಲ್ಲಿ ಮೆಲಟೋನಿನ್ ಎನ್ನುವ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ನಿದ್ರೆ ಮತ್ತು ಜಾಗೃತ ಚಕ್ರದ ಕೇಂದ್ರ ಭಾಗವಾಗಿದೆ. ಸಂಜೆಯ ಕತ್ತಲೆಯೊಂದಿಗೆ ಇದರ ಉತ್ಪಾದನೆಯು ಹೆಚ್ಚಾಗಿ ಆರೋಗ್ಯಕರ ನಿದ್ರೆಯನ್ನು ಉತ್ತೇಜಿಸುತ್ತದೆ. ಈ ಸಮಯದಲ್ಲಿ ದೇಹ ಸ್ವಯಂ ದುರಸ್ತಿಯ ಸ್ಥಿತಿಯಲ್ಲಿರುತ್ತದೆ. ಬ್ರಾಹ್ಮೀ ಮುಹೂರ್ತ ಅಥವಾ ಸರಸ್ವತಿ ಯಮ(ಬೆಳಿಗ್ಗೆ 2 ರಿಂದ 6 ಘಂಟೆ) ದಲ್ಲಿ ಮನಸ್ಸು ದುರಸ್ತಿಯ ಸ್ಥಿತಿಯಲ್ಲಿರುತ್ತದೆ. ಈ ಸಮಯವು ಕಲಿಕೆ ಮತ್ತು ಜಾಗೃತಿಗೆ ಅತ್ಯಂತ ಸೂಕ್ತವಾಗಿರುತ್ತದೆ. ಬ್ರಹ್ಮಜ್ಞಾನದ ಸಾಧನೆಯಲ್ಲಿರುವವರು ಬ್ರಾಹ್ಮೀ ಮುಹೂರ್ತದಲ್ಲಿ ಏಳಬೇಕು ಎನ್ನುವುದು ಈ ಕಾರಣಕ್ಕಾಗಿ. ಮನಸ್ಸನ್ನು ಪ್ರಫುಲ್ಲಿತಗೊಳಿಸುವಂತಹ ಆಹಾರ, ಸರಿಯಾದ ನಿದ್ದೆ, ಮತ್ತು ಬ್ರಹ್ಮಚರ್ಯ ಇವು ಮೂರು ಆಯುರ್ವೇದದ ಸ್ಥಂಭಗಳು. ಇವು ಮೂರು ಸರಿಯಾಗಿದ್ದರೆ ಎಲ್ಲವೂ ಸರಿಯಾಗಿರುತ್ತದೆ ಎನ್ನುತ್ತಾರೆ ಡಾ.ಪಿ.ರಾಮ್ ಮನೋಹರ್.

ಬರಹ: ಶರೋನ್ ಶೆಟ್ಟಿ ಐಕಳ