ಉಡುಪಿ: ಭಾರತ ದೇಶದ ಸಂಸ್ಕೃತಿಯ ಅಡಿಗಲ್ಲು ಆಗಿದ್ದ ರಾಮಮಂದಿರದ ಪುನರ್ ನಿರ್ಮಾಣ ಆಗಬೇಕೆನ್ನುವುದು ಶತಶತಮಾನಗಳ ಕನಸು. ರಾಮಮಂದಿರ ನಿರ್ಮಾಣ ಕೇವಲ ಕನಸು ಮಾತ್ರವಲ್ಲ, ಅದರ ಹಿಂದೆ ಅಸಂಖ್ಯಾತ ಹಿಂದೂಗಳ ಹೋರಾಟ, ಬಲಿದಾನವಿದೆ ಎಂದು ರಾಮಮಂದಿರ ನಿರ್ಮಾಣ ಟ್ರಸ್ಟಿಯು ಆಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಸೋಮವಾರ ವಿಡಿಯೋ ಹೇಳಿಕೆ ಮೂಲಕ ಸಂದೇಶ ನೀಡಿದ ಶ್ರೀಗಳು, ರಾಮಾಯಣ ಹಾಗೂ ಮಹಾಭಾರತ ನಮ್ಮ ದೇಶದ ಸಂಸ್ಕೃತಿಯ ಮೂಲ ಬೇರುಗಳು. ನಮ್ಮಲ್ಲಿರುವ ಸನಾತನ ಸಂಸ್ಕೃತಿ, ಪರಂಪರೆಯಿಂದಾಗಿ ಭಾರತ ದೇಶಕ್ಕೆ ಇಂದಿಗೂ ಜಗತ್ತಿನಲ್ಲಿ ಶ್ರೇಷ್ಠವಾದ ಸ್ಥಾನ, ಗೌರವ ಲಭಿಸಿದೆ ಎಂದರು.
ರಾಮಾಯಣದ ಮಹಾನಾಯಕ ಶ್ರೀರಾಮಚಂದ್ರ. ಮಹಾಭಾರತದ ಮೂಲ ಶ್ರೀಕೃಷ್ಣ. ಶ್ರೀರಾಮ ನಮ್ಮೆಲ್ಲರಿಗೂ ಕೂಡ ಆದರ್ಶ ಪುರುಷನಾಗಿದ್ದಾನೆ. ಅಂತಹ ಅವತಾರ ಪುರುಷ ಶ್ರೀರಾಮಚಂದ್ರನಿಗೆ ಅಯೋಧ್ಯೆಯಲ್ಲಿದ್ದ ಭವ್ಯ ಮಂದಿರ ವಿದೇಶಿಯರ ಆಕ್ರಮಣದಿಂದಾಗಿ ಭಗ್ನವಾಗಿ ಹೋಯಿತು ಎಂದು ಹೇಳಿದರು.
ಶ್ರೀರಾಮನ ಭವ್ಯವಾದ ಮಂದಿರ ಆದಷ್ಟು ಬೇಗ ನಿರ್ಮಾಣ ಆಗಬೇಕು. ಆ ಮೂಲಕ ಭಾರತ ದೇಶದ ಸಂಸ್ಕೃತಿಯ ಶಿಖರ ಜಗತ್ತಿನ ಉದ್ದಗಲಕ್ಕೂ ಪಸರಿಸಬೇಕು. ಹಾಗಾಗಿ ರಾಮಮಂದರಿ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ತೊಡಬೇಕು. ಆದಷ್ಟು ಬೇಗ ಮಂದಿರ ನಿರ್ಮಾಣವಾಗಿ ಇಡೀ ಜಗತ್ತಿಗೆ ಒಳಿತಾಗಬೇಕು ಎಂದು ಶ್ರೀಗಳು ಹೇಳಿದರು.