ಅಯೋಧ್ಯೆಯಲ್ಲಿ ಭಯೋತ್ಪಾದಕರಿಂದ ದಾಳಿಗೆ ಸಂಚು: ಗುಪ್ತಚರ ಇಲಾಖೆಯಿಂದ ಮಾಹಿತಿ

ನವದೆಹಲಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮಮಂದಿರದ ಭೂಮಿ ಪೂಜೆ ಆ. 5 ರಂದು ನಡೆಯಲಿದ್ದು, ಇದನ್ನು ಗುರಿಯನ್ನಾಗಿಸಿ ಆ.15 ರಂದು ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಭಯೋತ್ಪಾದಕ ಗುಂಪು ಸಂಚು ನಡೆಸಿವೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಈ ಭಯೋತ್ಪಾದಕರನ್ನು ಮೂರರಿಂದ ಐದು ಗುಂಪುಗಳಲ್ಲಾಗಿ ಭಾರತಕ್ಕೆ ಕಳುಹಿಸಲು ಸಂಚು ರೂಪಿಸಲಾಗಿದೆ ಎಂದು ಅದು ಬಹಿರಂಗಪಡಿಸಿದೆ.
ಆ.5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಶ್ರೀರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಕಳೆದ ವರ್ಷ ಆ.೫ರಂದು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370 ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಲಾಗಿತ್ತು.ಇದರಿಂದ ಪಾಕ್ ಪ್ರಾಯೋಜಿತ ವಿದ್ರೋಹಿ ಗುಂಪುಗಳಿಗೆ ಭಾರೀ ಹಿನ್ನಡೆಯುಂಟಾಗಿತ್ತು.
ಆ.15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆಯೂ ಇದ್ದು, ವಿವಿಧ ಸ್ಥಳಗಳಲ್ಲಿ ಭಯೋತ್ಪಾದಕ ಗುಂಪುಗಳು ದಾಳಿಗೆ ಷಡ್ಯಂತ್ರ ರೂಪಿಸುತ್ತಿವೆ.ಭಯೋತ್ಪಾದಕರ ವಿವಿಐಪಿಗಳ ಮೇಲೆ ಗುರಿ ಇಟ್ಟಿರುವುದರಿಂದ ದಿಲ್ಲಿ , ಅಯೋಧ್ಯೆ ಮತ್ತು ಕಾಶ್ಮೀರದಲ್ಲಿ ಜಾಗರೂಕತೆ ವಹಿಸುವಂತೆ ಗುಪ್ತಚರ ಸಂಸ್ಥೆಗಳು ಸೂಚಿಸಿವೆ.