ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರಿಂದ ಭೂಮಿಪೂಜೆ

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 12.44ರ ಶುಭ ಮುಹೂರ್ತದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಶಂಕುಸ್ಥಾಪನೆಗೆ ನಂದಾ, ಜಯಾ, ರಿಕ್ಷಾ, ಭದ್ರಾ ಹಾಗೂ ಪೂರ್ಣಾ ಎಂಬ 22.6 ಕೆ.ಜಿ. ತೂಕದ ಐದು ಇಟ್ಟಿಗೆಗಳನ್ನು ಬಳಸಲಾಯಿತು. ಭೂಮಿಪೂಜೆಗೆ ಬಳಸುವ ಗುದ್ದಲಿಯನ್ನು ಧಾರ್ಮಿಕ ವಿಧಿವಿಧಾನಗಳ ಮೂಲಕ ಪೂಜಿಸಲಾಯಿತು. ಪ್ರಧಾನಿ ಮೋದಿ ಅವರು ಭೂಮಿಗೆ ಆರತಿ ಮಾಡಿದರು. ಭೂಮಿಯಿಂದ ಮಣ್ಣನ್ನು ತೆಗೆದು ಹಣೆಗೆ ಹಚ್ಚಿ ನಮಸ್ಕರಿಸಿದರು. ಭೂಮಿಪೂಜೆಗೆ ನಿಗದಿಪಡಿಸಿದ್ದ ಸ್ಥಳಕ್ಕೆ ಪ್ರದಕ್ಷಿಣೆ ಮಾಡಿದರು.
ವಿದ್ವಾಂಸರ ವೇದಮಂತ್ರ ಪಠಣ ಹಾಗೂ ಭಕ್ತರಿಂದ ರಾಮಾಯಣ ಶ್ಲೋಕಗಳ ಪಠಣ ನಿರಂತರವಾಗಿ ನಡೆಯಿತು. ಎಲ್ಲೆಡೆಯೂ ಜೈ ಶ್ರೀರಾಮ್ ಎಂಬ ಜಯಕಾರ ಮೊಳಗಿತು. ಋತ್ವಿಜಯರ ಶಾಂತಿ ಮಂತ್ರದೊಂದಿಗೆ ಮಂದಿರದ ಭೂಮಿಪೂಜೆ ನಿರ್ವಿಘ್ನವಾಗಿ ನೆರವೇರಿತು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಾಟೇಲ್, ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ಮೊದಲಾವರು ಶುಭಕಾರ್ಯದಲ್ಲಿ ಪಾಲ್ಗೊಂಡರು.