ಉಡುಪಿ: ಕ್ಷೇತ್ರ ಶಿಕ್ಷಣ ಇಲಾಖೆ, ಉಡುಪಿ ಇವರ ಸಹಯೋಗದಲ್ಲಿ ತ್ರಿಶಾ ಸಮೂಹ ಸಂಸ್ಥೆಗಳು ಮತ್ತು ಎಸ್.ವಿ.ಎಸ್. ಟ್ರಸ್ಟ್, ಕಟಪಾಡಿ ಇವರ ಆಶ್ರಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆಂದು ಅರಿವು ಕಾರ್ಯಗಾರವನ್ನು ಆಗಸ್ಟ್ 26 ರಂದು ಏರ್ಪಡಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಏಕಾಗ್ರತೆ, ಧ್ಯಾನ ಮತ್ತು ಅಧ್ಯಯನವು ಮಕ್ಕಳ ಭವಿತವ್ಯವನ್ನು ಉಜ್ವಲಗೊಳಿಸುತ್ತದೆ ಎಂದು ತಿಳಿಸಿದರು.
ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಆಗಮಿಸಿದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯದ ವಿವಿಧ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್.ವಿ.ಎಸ್.ಟ್ರಸ್ಟ್ ಕಟಪಾಡಿ ಇದರ ಕಾರ್ಯದರ್ಶಿ ಕೆ.ಎಸ್.ಪೈ ಮಾತನಾಡಿ ಭಾರತೀಯರು ವಿಶ್ವದೆಲ್ಲೆಡೆ ಹರಡಿಕೊಂಡಿದ್ದು ನಮ್ಮ ದೇಶದ ವಿದ್ಯಾರ್ಥಿಗಳ ಕೌಶಲ್ಯಕ್ಕೆ ಜಗತ್ತೇ ತಲೆದೂಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ, ಶಕ್ತಿ ಕಾಲೇಜು ಮಂಗಳೂರಿನ ಪ್ರಾಂಶುಪಾಲ ಪೃಥ್ವಿರಾಜ್, ಸಕ್ಸಸ್ ಅಕಾಡೆಮಿಯ ಸಂಸ್ಥಾಪಕ ಅಭಿಲಾಶ್ ಕ್ಷತ್ರಿಯ, ತ್ರಿಶಾ ವಿದ್ಯಾ ಕಾಲೇಜಿನ ಪ್ರಾಚಾರ್ಯ ಪ್ರೊ.ಗುರುಪ್ರಸಾದ್ ರಾವ್ ವಿವಿಧ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಒಟ್ಟು ಹನ್ನೆರಡು ಶಾಲೆಗಳಿಂದ 130ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್.ವಿ.ಎಸ್.ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ತಂತ್ರಿ, ತ್ರಿಶಾ ಸಮೂಹ ಸಂಸ್ಥೆಯ ಟ್ರಸ್ಟಿಗಳಾದ ನಮಿತಾ ಜಿ.ಭಟ್ ಮತ್ತು ರಾಮ ಪ್ರಭು, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನ ಪ್ರಾಚಾರ್ಯೆ ಪ್ರೊ. ಇಂದುರೀತಿ, ತ್ರಿಶಾ ಕ್ಲಾಸಸ್ ಉಡುಪಿಯ ಮುಖ್ಯಸ್ಥ ಮಹೇಶ್ ಭಟ್ ಹಾಗೂ ಶೈಕ್ಷಣಿಕ ಮುಖ್ಯಸ್ಥ ಪ್ರತಿಭಾ ನಾಯಕ್ ಉಪಸ್ಥಿತರಿದ್ದರು.