ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯದ ಮಹತ್ವದ ಕುರಿತು ಅರಿವು ಕಾರ್ಯಕ್ರಮ

ಉಡುಪಿ: ಅಜ್ಜರಕಾಡಿನ ವಿದ್ಯಾ ವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದಲ್ಲಿ ಆ. 18 ರಂದು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ ಮತ್ತು ಡಿಜಿಟಲ್ ಗ್ರಂಥಾಲಯ ಹಾಗೂ ಗ್ರಂಥಗಳ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ವಸಂತಿ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಗ್ರಂಥಾಲಯ ಮತ್ತು ಗ್ರಂಥಗಳ ಮಹತ್ವದ ಬಗ್ಗೆ ಉಪನ್ಯಾಸವನ್ನು ನೀಡಿದ ಅವರು, ಜ್ಞಾನದೇಗುಲಗಳಾದ ಗ್ರಂಥಾಲಯದ ಸದ್ಬಳಕೆ ಮಾಡಿಕೊಂಡರೆ ಜೀವನದ ಅಂಧಕಾರವು ದೂರಾವಾಗಿ ಜ್ಞಾನವೆಂಬ ಬೆಳಕು ನಮ್ಮ ಜೀವನದಲ್ಲಿ ನೆಲೆಗೊಳ್ಳುತ್ತದೆ. ಆದುದರಿಂದ ಆದಷ್ಟು ಗ್ರಂಥಾಲಯಗಳ ಸದುಪಯೋಗಪಡಿಸಿಕೊಳ್ಳಿ. ವಿದ್ಯಾರ್ಥಿ ಜೀವನವು ಬದುಕಿನ ಪ್ರಮುಖಘಟ್ಟ. ಈ ಜೀವನದಲ್ಲಿ ಮೊಬೈಲ್ ಹಾಗೂ ದುಶ್ಚಟಗಳಿಂದ ದೂರವಿದ್ದು ಜೀವನದ ಮೌಲ್ಯಗಳನ್ನು ಅರಿತು ಇನ್ನಷ್ಟು ಜ್ಞಾನ ಹೆಚ್ಚಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಪೂರ್ಣ ಪ್ರಜ್ಞಾ ಇನ್ಸ್ಟಿಟ್ಯೂಟ್ ನ ಗ್ರಂಥಾಲಯ ಕಮಿಟಿ ಸಂಯೋಜಕ ಸುಜಾತ ಜಿ.ಎಲ್. ಗ್ರಂಥಾಲಯವನ್ನು ವೀಕ್ಷಿಸಿ ಕಾಲೇಜು ಮುಗಿದ ನಂತರ ಯು.ಪಿ.ಎಸ್.ಸಿ ಮತ್ತು ಕೆ.ಎ.ಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಾಗ ಇಂತಹ ಗ್ರಂಥಾಲಯದ ಉಪಯುಕ್ತತೆಯನ್ನು ಪಡೆದುಕೊಂಡರೆ ಮನುಷ್ಯನ ವ್ಯಕ್ತಿತ್ವವನ್ನು ಬದಲಿಸಬಹುದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಗ್ರಂಥಾಲಯಗಳಿಂದ ಮಾತ್ರ ಸಾಧ್ಯ. ಹೆಚ್ಚು ಗ್ರಂಥಗಳನ್ನು ಓದುವುದರಿಂದ ನಿಮ್ಮ ಉತ್ತಮ ಭವಿಷ್ಯವನ್ನು ರೂಪಿಸಬಹುದು ಎಂದು ಕಿವಿ ಮಾತು ಹೇಳಿದರು.

ಪೂರ್ಣ ಪ್ರಜ್ಞಾ ಇನ್ಸ್ಟಿಟ್ಯೂಟ್ ನ ಗ್ರಂಥಪಾಲಕ ಪುರೋಷತ್ತಮ ಗೌಡ ಪಿ.ಸಿ. ಮಾತನಾಡಿ, ಪಠ್ಯ ಪುಸ್ತಕವಲ್ಲದೆ ಪಠ್ಯೇತ್ತರ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ ಎಂದರು.

ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಾಲಯ ಸಹಾಯಕಿ ಸುನೀತ ಪ್ರಾರ್ಥಿಸಿದರು. ಗ್ರಂಥಪಾಲಕಿ ರಂಜಿತ ಸಿ ನಿರೂಪಿಸಿದರು. ಪ್ರಥಮ ದರ್ಜೆ ಸಹಾಯಕ ಶಕುಂತಳಾ ಕುಂದರ್ ವಂದಿಸಿದರು.