ಬ್ರಹ್ಮಾವರ: ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಮಕ್ಕಳ ರಕ್ಷಣೆಯ ಕುರಿತು ಅರಿವು ಕಾರ್ಯಕ್ರಮ

ಬ್ರಹ್ಮಾವರ: ಚೈಲ್ಡ್ ಲೈನ್-1098, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ರೋಟರಿ ಉಡುಪಿ ಇವರ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಅಂಗವಾಗಿ ಸರ್ಕಾರಿ ಪ್ರಾಥಮಿಕ ಶಾಲೆ ಬ್ರಹ್ಮಾವರ ಇಲ್ಲಿ ಮಕ್ಕಳ ರಕ್ಷಣೆಯ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಧನ್ವಂತರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹೆಣ್ಣು ಮಕ್ಕಳ ಸಬಲೀಕರಣದ ಕುರಿತು ಕಿರುಪ್ರಹಸನವನ್ನು ಪ್ರಸ್ತುತಪಡಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಶ್ರೀಮತಿ ಮುಕ್ತಾಬಾಯಿ, ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳ ಮೇಲಾಗುವ ದೈಹಿಕ ಮತ್ತು ಲೈಂಗಿಕ ದೌರ್ಜನ್ಯಗಳ ಮತ್ತು ಫೋಕ್ಸೋ ಕಾಯಿದೆಯ ಕುರಿತು ಮಕ್ಕಳಿಗೆ ಅರಿವನ್ನು ಮೂಡಿಸಿ ಮಕ್ಕಳು ಅಪರಿಚಿತರ ಕುರಿತಾಗಿ ಸದಾ ಎಚ್ಚರದಿಂದ ಇರಬೇಕೆಂದರು. ಅಸುರಕ್ಷಿತ ಸ್ಪರ್ಶಗಳ ಕುರಿತು ಮಕ್ಕಳಿಗೆ ಅರಿವನ್ನು ಮೂಡಿಸಿದ ಅವರು ಬಾಲಕಾರ್ಮಿಕ ಪದ್ದತಿ ಮತ್ತು ಬಾಲ್ಯ ವಿವಾಹದ ಪರಿಣಾಮದ ಕುರಿತು ತಿಳಿ ಹೇಳಿದರು. ಮಕ್ಕಳೆಲ್ಲರೂ ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕೆಂಬ ಅರಿವನ್ನು ಮೂಡಿಸಿ ಮಕ್ಕಳು ತಮ್ಮನ್ನು ತಾವು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ವಿಷಯಗಳಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದರು. ಯಾವುದೇ ರೀತಿಯಾದ ಸಮಸ್ಯೆಯಾದಲ್ಲಿ ಚೈಲ್ಡ್ ಲೈನ್ 1098 ಇದಕ್ಕೆ ಕರೆ ಮಾಡಿ ಸಹಾಯವನ್ನು ಪಡೆಯಲು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಸಂಯೋಜಕ ಪ್ರಕಾಶ್.ಬಿ.ಬಿ, ಶಿಕ್ಷಣದ ಮಹತ್ವದ ಕುರಿತು ಹಾಗೂ ಮಕ್ಕಳ ಹಕ್ಕು- ಕರ್ತವ್ಯದ ಕುರಿತು ಮಾಹಿತಿ ನೀಡಿದರು.

ಚೈಲ್ಡ್ ಲೈನ್-1098 ಉಡುಪಿಯ ಸಹನಿರ್ದೆಶಕ ಗುರುರಾಜ್ ಭಟ್, ಬ್ರಹ್ಮಾವರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‍ಸ್ಟೇಬಲ್ ಪ್ರವೀಣ್, ಎಸ್.ಡಿ.ಎಮ್.ಸಿಯ ಉಪಾದ್ಯಕ್ಷೆ ಶ್ರೀಮತಿ ಸರಿತಾ ಮತ್ತು ಚೈಲ್ಡ್ ಲೈನ್ ಸಿಬ್ಬಂದಿಗಳು, ಮಕ್ಕಳು ಉಪಸ್ಥಿತರಿದ್ದರು.

ಚೈಲ್ಡ್ ಲೈನ್-1098 ಉಡುಪಿಯ ಕೇಂದ್ರ ಸಂಯೋಜಕಿ ಜ್ಯೋತಿ ನಿರೂಪಿಸಿ, ಚೈಲ್ಡ್ ಲೈನ್-1098 ಉಡುಪಿಯ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿ, ಬ್ರಹ್ಮಾವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ದೇವಕುಮಾರಿ ವಂದಿಸಿದರು.