ಮಾದಕ ವ್ಯಸನ ಮುಕ್ತ ಯುವ ಸಮಾಜಕ್ಕಾಗಿ ಜಾಗೃತಿ ಕಾರ್ಯಕ್ರಮ ಅತ್ಯಗತ್ಯ: ನಿತಿನ್ ರಾವ್ ವೈರೈಸ್- ಬೇಡ ಬ್ರೋ ಕಾರ್ಯಕ್ರಮದಲ್ಲಿ ಅಭಿಮತ

ಉಡುಪಿ: ದೇಶದ ಯುವಜನತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯ ಸೇವನೆ ವ್ಯಸನವು ಹೆಚ್ಚಾಗಿದ್ದು, ಜಿಲ್ಲೆಯಲ್ಲಿಯೂ ಹಲವಾರು ಪ್ರಕರಣಗಳು ಕಂಡುಬoದಿವೆ. ಯುವಕರಿಗೆ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ. ಕಾರ್ಯಾಗಾರಗಳನ್ನು ನಡೆಸುವುದರಿಂದ ಅವರಲ್ಲಿ ಮಾದಕ ವಸ್ತುಗಳು ಮತ್ತು ಅವುಗಳಿಂದ ಆಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನಿತಿನ್ ರಾವ್ ವೈ. ಹೇಳಿದರು.

ಅವರು ಇಂದು ನಗರದ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಮಾದಕ ವ್ಯಸನ ಜಾಗೃತಿ ಕಾರ್ಯಕ್ರಮ ‘ರೈಸ್ ಮತ್ತು ಬೇಡ ಬ್ರೋ’ ಅಂಗವಾಗಿ ಜಿಲ್ಲಾಮಟ್ಟದ ಕಾಲೇಜು ಮಾದಕ ವ್ಯಸನ ವಿರೋಧಿ ಮತ್ತು ಜಾಗೃತಿ ಸಮಿತಿಗಳ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಯುವ ಜನರು ಮಾದಕ ವ್ಯಸನಿಗಳಾಗಲು ಕುಟುಂಬ ಸಮಸ್ಯೆ, ಒಂದು ಬಾರಿ ಸೇವಿಸಿ ನೋಡುವ ಕುತೂಹಲ, ಸ್ನೇಹಿತರ ಒತ್ತಾಯ, ಶೈಕ್ಷಣಿಕ ಒತ್ತಡ, ಚಲನಚಿತ್ರಗಳಲ್ಲಿ ನಟರು ಸಿಗರೇಟ್ ಸೇದುವುದು ಮದ್ಯಪಾನ ಮಾಡುವುದು ಇವೆಲ್ಲ ಪ್ರಮುಖ ಕಾರಣಗಳಾಗಬಹುದು. ಯುವ ಜನರು ಇವುಗಳ ಬಲೆಗೆ ಸಿಲುಕಿ ಅಥವಾ ಪ್ರೇರಣೆ ಪಡೆದು ದುಶ್ಚಟಗಳ ದಾಸರಾಗಬಾರದು ಎಂದರು.

ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕಾರ ಮಾದಕ ವಸ್ತುಗಳ ಉತ್ಪಾದನೆ, ಸಾಗಾಣಿಕೆ, ಸೇವನೆ ಮತ್ತು ಇಟ್ಟುಕೊಳ್ಳುವಿಕೆ ಶಿಕ್ಷಾರ್ಹ ಅಪರಾಧ. 1 ಕಿಲೋಗಿಂತ ಹೆಚ್ಚಿನ ಮಾದಕ ವಸ್ತುಗಳನ್ನು ಹೊಂದಿದ್ದರೆ ಅದು ವಾಣಿಜ್ಯ ಪ್ರಕರಣವಾಗಿ ಇದರಲ್ಲಿ ಜಾಮೀನು ಕೂಡಾ ಸಿಗುವುದಿಲ್ಲ. ಯಾರಾದರೂ ಮಾದಕ ವಸ್ತುಗಳನ್ನು ಸೇವಿಸುವುದು ಅಥವಾ ಮಾರಾಟ ಮಾಡುವುದು ಕಂಡುಬoದಲ್ಲಿ ಕೂಡಲೇ ಕುಟುಂಬ ಸದಸ್ಯರಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಜಾಗೃತಿ ಫಲಕ ಬಿಡುಗಡೆಗೊಳಿಸಿ ಮಾತನಾಡಿ, ಯುವಜನತೆಯಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮದ ಅವಶ್ಯಕತೆ ಇದೆ. ಜೀವನದಲ್ಲಿ ನಾವು ಏನಾಗಬೇಕು ಎನ್ನುವುದು ನಮ್ಮ ಕೈಯಲ್ಲೇ ಇದೆ. ಯುವ ಜನರು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಕಾರ್ಯಾಗಾರದಲ್ಲಿ ಪಡೆದ ಮಾಹಿತಿಯನ್ನು ಸ್ನೇಹಿತರು ಮತ್ತು ಕುಟುಂಬದವರ ಜೊತೆ ಹಂಚಿಕೊoಡು ಎಲ್ಲರೂ ಮಾದಕ ವಸ್ತುಗಳಿಂದ ದೂರ ಇರುವಂತೆ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾದಕ ವಸ್ತುಗಳನ್ನು ಸೇವಿಸುವಂತೆ ಆಮಿಷ ನೀಡಲಾಗುತ್ತದೆ. ಯುವಕರಿಗೆ ಮಾದಕ ವಸ್ತುಗಳನ್ನು ನೀಡಿ ಅಪರಾಧ ಪ್ರಕರಣಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಕೇವಲ ವೈಯಕ್ತಿಕ ಮತ್ತು ಸಾಮಾಜಿಕ ಸಮಸ್ಯೆ ಮಾತ್ರವಲ್ಲ ಇದು ದೇಶದ ಆಂತರಿಕ ಭದ್ರತೆಯ ಸಮಸ್ಯೆ ಕೂಡಾ ಹೌದು. ಶತ್ರು ದೇಶಗಳು ನಮ್ಮ ಯುವಕರನ್ನು ಮಾದಕ ವಸ್ತುಗಳ ದಾಸರಾಗಿಸಿ ದೇಶದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುವ ಹುನ್ನಾರವಾಗಿದೆ.

ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ತಡೆಯಲು ಕ್ಯೂಆರ್ ಕೋಡ್ ಅನ್ನು ಬಿಡುಗಡೆ ಮಾಡಿದ್ದು ಸಾರ್ವಜನಿಕರು ಮಾಹಿತಿ ನೀಡಬಹುದು. ಅದಾಗಲೇ 500 ಇನ್‌ಪುಟ್ ಗಳು ಬಂದಿದ್ದು 42 ಪ್ರಕರಣ ದಾಖಲಾಗಿದೆ ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಪ್ರತಿಜ್ಞಾವಿಧಿ ಬೋಧಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಮನೋವೈದ್ಯ ಡಾ. ಪಿ. ವಿ. ಭಂಡಾರಿ, ಶ್ರೀ ಮಾತಾ ಆಸ್ಪತ್ರೆಯ ಪ್ರಕಾಶ್ ತೋಳಾರ್, ಮನೋ ವೈದ್ಯ ಡಾ. ವಿರೂಪಾಕ್ಷಪ್ಪ ದೇವರಮನೆ ಹಾಗೂ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ವಿಶೇಷ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಸರ್ಜನ್ ಡಾ. ಅಶೋಕ್, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ. ರೋಷನ್, ಪದವಿ ಕಾಲೇಜುಗಳ ಸಮನ್ವಯಕಾರ ರವೀಂದ್ರ ಉಪಾಧ್ಯಾಯ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಂಜುನಾಥ್ ಭಟ್, ಜಿ ಶಂಕರ್ ಕಾಲೇಜು ಪ್ರಾಂಶುಪಾಲೆ ನಿಕೇತನ, ತೆಂಕನಿಡಿಯೂರು ಕಾಲೇಜು ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ಉಪ ವಿಭಾಗ ಉಪ ನಿರೀಕ್ಷಕ ಎಚ್.ಡಿ ಕುಲಕರ್ಣಿ ಸ್ವಾಗತಿಸಿ, ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕ ರಾಘವೇಂದ್ರ ವಂದಿಸಿ, ಎಪಿಸಿ ಯೋಗೀಶ್ ನಿರೂಪಿಸಿದರು.