ಜಕಾರ್ತ (ಇಂಡೋನೇಷ್ಯಾ): ಭಾರತದ ಶಟ್ಲರ್ ಕಿರಣ್ ಜಾರ್ಜ್ ಅವರು ಭಾನುವಾರ ಇಂಡೋನೇಷ್ಯಾ ಮಾಸ್ಟರ್ಸ್ 2023 ರಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.ಇಂಡೋನೇಷ್ಯಾ ಮಾಸ್ಟರ್ಸ್ 2023 ರ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಭಾರತದ ಶಟ್ಲರ್ ಕಿರಣ್ ಜಾರ್ಜ್ ಗೆದ್ದಿದ್ದಾರೆ . ಜಪಾನ್‌ನ ವಿಶ್ವದ ನಂ 82 ನೇ ಶ್ರೇಯಾಂಕದ ಕೂ ತಕಾಹಶಿ ಅವರನ್ನು 21-19, 22-20 ರಿಂದ ಸೋಲಿಸಿದ ಕಿರಣ್ ಜಾರ್ಜ್ ತಮ್ಮ ಎರಡನೇ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 100 ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಪಡೆದರು. ಜಾರ್ಜ್ ಕಳೆದ ವರ್ಷ ಒಡಿಶಾ ಓಪನ್ ಫೈನಲ್‌ನಲ್ಲಿ ಭಾರತದ ಇನ್ನೊಬ್ಬ ಆಟಗಾರ ಪ್ರಿಯಾಂಶು ರಾವತ್ ಅವರನ್ನು ಸೋಲಿಸಿ ಪ್ರಶಸ್ತಿ ಪಡೆದಿದ್ದರು.
ಎರಡನೇ ಪಂದ್ಯವೂ ಇನ್ನಷ್ಟೂ ತುರುಸಿನ ಪೈಪೋಟಿಗೆ ಕಾರಣವಾಯಿತು. ಇಬ್ಬರು ಆಟಗಾರರು ಒಂದೊಂದು ಅಂಕವನ್ನು ಅಂತರ ಕಾಯ್ದುಕೊಳ್ಳದಂತೆ ಕಲೆಹಾಕಿದರು. 23 ವರ್ಷದ ಕಿರಣ್ 16 – 11ರ ಮುನ್ನಡೆ ಸಾಧಿಸಿದರು. ಆದರೆ ಈ ಸೆಟ್ನ್ನು ಜಪಾನ್‌ನ ಆಟಗಾರ ಟೈ ಬ್ರೇಕರ್ಗೆ ತೆಗೆದುಕೊಂಡು ಹೋದರು. ಈ ವೇಳೆ ನಿರ್ಣಾಯಕ ಅಂಕಗಳನ್ನು ಗಳಿಸಿದ, ಕಿರಣ್ ಎರಡು ನೇರ ಸೆಟ್ನ ಗೆಲುವಿನಿಂದ 2023 ರ ಬ್ಯಾಡ್ಮಿಂಟನ್ ಋತುವಿನ ತನ್ನ ಮೊದಲ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 100 ಪ್ರಶಸ್ತಿಯನ್ನು ಗೆದ್ದರು.
ಇಂಡೋನೇಷ್ಯಾ ಮಾಸ್ಟರ್ಸ್ ಫೈನಲ್‌ನಲ್ಲಿ, ಜಾರ್ಜ್ ಮತ್ತು ತಕಹಶಿ ನಡುವೆ ಮೊದಲ ಗೇಮ್‌ನಲ್ಲಿ ತುರುಸಿನ ಪೈಪೋಟಿ ಏರ್ಪಟ್ಟಿತ್ತು. 15ನೇ ಸ್ಕೋರ್‌ನಲ್ಲಿ ಇಬ್ಬರು ಆಟಗಾರರು ಸಮಬಲ ಸಾಧಿಸಿದ್ದರು. ನಂತರದ ಒಟ್ಟಾರೆ 10 ಅಂಕದಲ್ಲಿ 6ನ್ನು ಭಾರತೀಯ ಆಟಗಾರ ಪಡೆದರು. ಜಾರ್ಜ್ 15 ಪಾಯಿಂಟ್ ನಂತರ ಕೆಲ ಚತುರ ನಡೆಗಳನ್ನು ತೋರಿದರು. ಇದರಿಂದ 21 – 19 ರಿಂದ ಮೊದಲ ಸೆಟ್ ವಶಪಡಿಸಿಕೊಂಡರು.
ಇತ್ತಿಚೆಗೆ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ನ ಚೀನಾ ಓಪನ್ನಲ್ಲಿ ಭಾರತ ನೀರಸ ಪ್ರದರ್ಶನ ತೋರಿತ್ತು. ಭಾರತದ ಟಾಪ್ ಶ್ರೇಯಾಂಕಿತ ಆಟಗಾರರೇ ಮೊದಲ ಸುತ್ತಿನಲ್ಲಿ ಸೋಲನುಭವಿಸಿದ್ದರು. ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸಾತ್ವಿಕ್ – ಚಿರಾಗ್ ಜೋಡಿ ಹೊರಬಿದ್ದಿದ್ದರು, ಕಾಮನ್‌ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಲಕ್ಷ್ಯ ಸೇನ್ ಕೂಡ ಆರಂಭಿಕ ಸುತ್ತಿನಲ್ಲಿ ಡೆನ್ಮಾರ್ಕ್‌ನ ಆಂಡರ್ಸ್ ಆಂಟೊನ್ಸೆನ್ ವಿರುದ್ಧ 21-23, 21-16, ಮತ್ತು 9-2 ಸೆಟ್‌ಗಳಿಂದ ಪರಾಭವಗೊಂಡು ಸ್ಪರ್ಧೆಯಿಂದ ಹೊರಬಿದ್ದರು. ಬರುವ ಏಷ್ಯನ್ ಕ್ರೀಡಾಕೂಟದ ಮೇಲೆ ಕಣ್ಣಿಟ್ಟಿರುವ ಷಟ್ಲರ್‌ಗಳಾದ ಪಿವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಟೂರ್ನಿಯಿಂದ ಹಿಂದೆ ಸರಿದಿದ್ದರು.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಜಾರ್ಜ್ 2014ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೊ ಅವರನ್ನು ಮೂರು ಗೇಮ್‌ಗಳಲ್ಲಿ ಸೋಲಿಸಿದರು. ಜಾರ್ಜ್ ಅವರು ಇಂಡೋನೇಷ್ಯಾ ಮಾಸ್ಟರ್ಸ್ 2023 ರಲ್ಲಿ ಫೈನಲ್ ತಲುಪಿದ ಏಕೈಕ ಭಾರತೀಯರಾಗಿದ್ದರು. ಭಾರತದ ಮಹಿಳಾ ಡಬಲ್ಸ್ ಜೋಡಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಅವರು ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ಲ್ಯಾನಿ ಟ್ರಿಯಾ ಮಾಯಾಸರಿ ಮತ್ತು ರಿಬ್ಕಾ ಸುಗಿಯಾರ್ಟೊ ವಿರುದ್ಧ 20-22, 21-16, 21-13 ರಿಂದ ಸೋತಲನುಭವಿಸಿದ್ದಾರೆ












