ಉಡುಪಿ: ಜಿಲ್ಲಾ ಹಿಂದೂ ಜಾಗರಣ ವೇದಿಕೆ ವತಿಯಿಂದ ರಾಜಾಂಗಣ ಸಮೀಪ ಶನಿವಾರದಂದು ನಡೆದ ದುರ್ಗಾ ದೌಡ್ ಹಿಂದೂ ಶಕ್ತಿ ಸಂಚಲನ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದೂಸ್ಥಾನಿ, ಹಿಂದೂ ಧರ್ಮದ ಸ್ಥಾಪನೆಯಲ್ಲಿ ದುರ್ಗೆ-ಸೀತೆಯರ ಕೊಡುಗೆ ಅಪಾರವಿದ್ದು, ಕಲಿಯುಗದಲ್ಲಿ ಧರ್ಮ ಸಂಸ್ಥಾಪನೆಯ ಜವಾಬ್ದಾರಿಯನ್ನು ಮಹಿಳೆಯರ ಕೈಗೆ ನೀಡಬೇಕು. ಜಾಗೃತ ನಾರೀ ಶಕ್ತಿಯಿಂದ ದೇಶದಲ್ಲಿ ಇತಿಹಾಸ ನಿರ್ಮಾಣ ಸಾಧ್ಯ ಎಂದರು.
ಲವ್ ಜಿಹಾದ್ ಹಾಗೂ ಭೂಮಿ ಜಿಹಾದ್ ಮೂಲಕ ದೇಶದಲ್ಲಿ ಇಸ್ಲಾಮಿಕ್ ಆಕ್ರಮಣವಾಗುತ್ತಿದ್ದು, ಇದಕ್ಕೆ ಕುಮ್ಮಕ್ಕು ನೀಡುವ ಪಿ.ಎಫ್.ಐ ನಂತಹ ಸಂಘಟನೆಗಳು ದೇಶಕ್ಕೆ ಮಾರಕ. ಈ ಸಂಘಟನೆಗಳ ಸ್ಲೀಪರ್ ಸೆಲ್ ಗಳು ದೇಶವನ್ನು ವಿಭಜಿಸುವ ಕೃತ್ಯಗಳಲ್ಲಿ ತೊಡಗಿವೆ. ಹಿಂದೂ ಯುವತಿಯರ ಅಪಹರಣ, ಹತ್ಯೆ ನಡೆಯುತ್ತಿದ್ದರೂ ನಾವುಗಳು ಸುಮ್ಮನಿದ್ದೇವೆ. ಇದಕ್ಕೆ ನಾವು ಜಾತಿಗಳಲ್ಲಿ ವಿಭಜನೆ ಹೊಂದಿರುವುದು ಕಾರಣವಾಗಿದೆ. ಟಿವಿ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ಮತ್ತು ಸಿನಿಮಾಗಳು ಲವ್ ಜಿಹಾದ್ ಗೆ ಪ್ರೇರೇಪಣೆ ನೀಡುತ್ತಿವೆ. ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯ ಮನೆಯಿಂದಲೇ ಆರಂಭಗೊಳ್ಳಬೇಕು ಎಂದು ಅವರು ಹೇಳಿದರು.
ಹಿಂದೂ ಜಾಗರಣ ವೇದಿಕೆಯ ಎಲ್ಲ ಪದಾಧಿಕಾರಿಗಳು, ದೇವಸ್ಥಾನಗಳ ಮುಖಂಡರು ಉಪಸ್ಥಿತರಿದ್ದರು.
ಹಿಂ.ಜಾ.ವೇ ಜಿಲ್ಲಾ ಸಮಿತಿ ಸದಸ್ಯ ವಾಸುದೇವ ಗಂಗೊಳ್ಳಿ ಸ್ವಾಗತಿಸಿದರು. ದಾಮೋದರ ಶರ್ಮ ನಿರೂಪಿಸಿದರು.












