ತುಳುನಾಡ ಕಂಬಳಕ್ಕೆ ಸ್ವಯಂಚಾಲಿತ ಟೈಮ್ ಗೇಟ್ ಮತ್ತು ಫೋಟೋ ಫಿನಿಶ್ ತಂತ್ರಜ್ಞಾನದ ಪಾದಾರ್ಪಣೆ: ಅದಾನಿ ಫೌಂಡೇಶನ್ ನಿಂದ 10 ಲಕ್ಷ ರೂ ದೇಣಿಗೆ

ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳದಲ್ಲಿ ಸಮರ್ಥ ಸಮಯ ನಿರ್ವಹಣೆಗಾಗಿ ಸ್ವಯಂಚಾಲಿತ ಟೈಮ್ ಗೇಟ್ ಮತ್ತು ಫೋಟೋ ಫಿನಿಶ್ ಫಲಿತಾಂಶ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದ್ದಾರೆ.

ಹೊಸ ವ್ಯವಸ್ಥೆಯನ್ನು ಪರಿಚಯಿಸಲು ಅದಾನಿ ಫೌಂಡೇಶನ್ 10 ಲಕ್ಷ ರೂ ದೇಣಿಗೆ ನೀಡಿದ್ದು, ಬುಧವಾರ ನಡೆದ ಸಮಾರಂಭದಲ್ಲಿ ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಸಮಿತಿ ಅಧ್ಯಕ್ಷರಿಗೆ ಚೆಕ್ ಹಸ್ತಾಂತರಿಸಿದ ಸಂದರ್ಭದಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

ಕೆಲವು ಕೋಣಗಳು ಓಟ ಆರಂಭಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಕಂಬಳದಲ್ಲಿ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ. ಕೆಲವೊಮ್ಮೆ ಅವು ಓಟವನ್ನು ಪ್ರಾರಂಭಿಸಲು ಒಂದು ಅಥವಾ ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಇಂತಹ ಸಂಗತಿಗಳು ಓಟದ ವಿಳಂಬಕ್ಕೆ ಕಾರಣವಾಗುತ್ತದೆ. ಹೊಸ ವ್ಯವಸ್ಥೆಯು ಅಂತಹ ವಿಳಂಬಗಳನ್ನು ನಿವಾರಿಸುತ್ತದೆ ಮತ್ತು 24 ಗಂಟೆಗಳ ಒಳಗೆ ಅದನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ. ಹೊಸ ವ್ಯವಸ್ಥೆಯಲ್ಲಿ, ಕೋಣ ಓಡಿಸುವವರಿಗೆ ಓಟವನ್ನು ಪ್ರಾರಂಭಿಸಲು 5 ಅಥವಾ 10 ನಿಮಿಷಗಳು ಸಿಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಿಗದಿತ ಸಮಯದೊಳಗೆ ಕೋಣಗಳ ಓಟವನ್ನು ಪ್ರಾರಂಭಿಸಲು ವಿಫಲರಾದರೆ, ರೆಫರಿ ಅವರಿಗೆ ಮತ್ತೊಂದು ಅವಕಾಶವನ್ನು ನೀಡುವ ಅಥವಾ ಅವರನ್ನು ಅನರ್ಹಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಹೊಸ ವ್ಯವಸ್ಥೆಯು ಟ್ರಾಫಿಕ್ ದೀಪಗಳನ್ನು (ಕೆಂಪು, ಹಳದಿ ಮತ್ತು ಹಸಿರು) ಹೊಂದಿದ್ದು, ಇದು ಆಟದ ಪ್ರಾರಂಭದ ಬಗ್ಗೆ ನಿರ್ವಾಹಕರನ್ನು ಎಚ್ಚರಿಸುತ್ತದೆ. ಫೆಬ್ರವರಿ 3 ರಂದು ಉಡುಪಿ ಜಿಲ್ಲೆಯ ಐಕಳ ಗ್ರಾಮದಲ್ಲಿ ನಡೆಯಲಿರುವ ಐಕಳ ಕಾಂತಬಾರೆ ಬೂದುಬಾರೆ ಕಂಬಳದಲ್ಲಿ ಹೊಸ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗುವುದು. ಅದರ ಯಶಸ್ಸಿನ ಆಧಾರದ ಮೇಲೆ, ಭವಿಷ್ಯದಲ್ಲಿ ಎಲ್ಲಾ ಕಂಬಳ ಕಾರ್ಯಕ್ರಮಗಳಿಗೆ ಇದನ್ನು ವಿಸ್ತರಿಸಲಾಗುವುದು. ಹೊಸ ವ್ಯವಸ್ಥೆಯು ಸಾಂಪ್ರದಾಯಿಕ ಕ್ರೀಡೆಯನ್ನು ನವೀಕರಿಸುತ್ತದೆ ಮತ್ತು ಪ್ರಪಂಚದಾದ್ಯಂತ ಹೆಚ್ಚು ಜನಪ್ರಿಯವಾಗಲು ಸಹಕರಿಸುತ್ತದೆ ಎಂದಿದ್ದಾರೆ.

ಈ ತಂತ್ರಜ್ಞಾನವನ್ನು ರತ್ನಾಕರ್ ನೈಕ್ ಕಾರ್ಕಳ ಅವರು ಇನ್ನೋವೇಶನ್ ಬಿಯಾಂಡ್ ಇಮ್ಯಾಜಿನೇಷನ್ (INBI) ನೆಕ್ಸ್ಟ್ ಜನ್ ಪ್ರೈವೇಟ್ ಲಿಮಿಟೆಡ್ ಮೂಲಕ ಅಭಿವೃದ್ಧಿಪಡಿಸಿದ್ದಾರೆ