ಉಡುಪಿ: ಬನ್ನಂಜೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೆಸರಾಂತ ಬಟ್ಟೆ ಮಳಿಗೆಯ ಮಾಲಿಕರು ಹಾಗೂ ಸಿಬ್ಬಂದಿಗಳು ರಿಕ್ಷಾ ಚಾಲಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಅವರ ವಿರುದ್ದ ಕ್ರಮಕೈಗೊಳ್ಳಲು ಆಗ್ರಹಿಸಿ ರಿಕ್ಷಾ ಚಾಲಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಟ್ಟೆ ಮಳಿಗೆಯ ಮಾಲಕರು ಹಾಗೂ ಸಿಬ್ಬಂದಿಗಳು ಇತ್ತೀಚೆಗಷ್ಟೇ ಆಟೋ ರಿಕ್ಷಾ ಚಾಲಕರೊಬ್ಬರ ಕೀಯನ್ನು ಕಸಿದುಕೊಂಡು ರಿಕ್ಷಾ ತೆಗೆಯದಂತೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಳಿಗೆ ಮುಂದೆ ಗಲಾಟೆ ನಡೆದಿದ್ದು ನಂತರ ಪೊಲೀಸರ ಮಧ್ಯ ಪ್ರವೇಶದಿಂದ ಸಂಧಾನ ಏರ್ಪಟ್ಟಿತ್ತು.
ಆದರೆ ಉಡುಪಿ ಜಿಲ್ಲೆಯ ರಿಕ್ಷ ಚಾಲಕರ ಸಂಘವು ಮಳಿಗೆಯ ಮಾಲಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಬಡ ಆಟೋ ರಿಕ್ಷಾ ಚಾಲಕನ ಕೀ ಕಸಿದುಕೊಂಡು ಆತನ ಮೇಲೆ ದಬ್ಬಾಳಿಕೆ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಆರೋಪಿಸಿ ಪ್ರತಿಭಟನೆ ನಡೆಸಿ ಅವರ ಮೇಲೆ ಕ್ರಮಕೈಗೊಳ್ಳುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆಟೋ ಚಾಲಕ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಅಧ್ಯಕ್ಷ ದಿವಾಕರ ಪೂಜಾರಿ ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.