ಬೆಂಕಿಪೊಟ್ಟಣ ನೀಡದಿದ್ದಕ್ಕೆ ಆಟೋ ಚಾಲಕನಿಗೆ ಚೂರಿ ಇರಿದು ಕೊಲೆಗೆ ಯತ್ನ

ಬೆಂಗಳೂರು: ಆಟೊ ಚಾಲಕ ಸರ್ದಾರ್ ಎಂಬುವವರನ್ನು ಬೆಂಕಿಪೊಟ್ಟಣ ನೀಡಲಿಲ್ಲವೆಂಬ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ ಘಟನೆ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

‘ಸ್ಥಳೀಯ ಜಾನಕಿರಾಮ್ ಬಡಾವಣೆ ನಿವಾಸಿ ಸರ್ದಾರ್ ಅವರು ಘಟನೆ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೃತ್ಯದ ನಂತರ ಆರೋಪಿ ಪರಾರಿಯಾಗಿದ್ದು, ಆತನನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

ಸೋಮವಾರ ಸಂಜೆ ಸರ್ದಾರ್ ಅವರು ಆಟೊ ಚಲಾಯಿಸಿಕೊಂಡು ಮನೆ ಸಮೀಪದಲ್ಲಿ ಹೋಗುತ್ತಿದ್ದರು. ಯುವಕನೊಬ್ಬ ಯುವತಿ ಜೊತೆ ಬೈಕ್‌ನಲ್ಲಿ ಬಂದು ಆಟೊ ಅಡ್ಡಗಟ್ಟಿ ಸಿಗರೇಟ್ ಸೇದಲು ಬೆಂಕಿ ಪೊಟ್ಟಣ ನೀಡುವಂತೆ ಕೇಳಿದ್ದ. ಸರ್ದಾರ್ ತಮ್ಮ ಬಳಿ ಇಲ್ಲವೆಂದು ಹೇಳಿದ್ದರು. ಇದಕ್ಕೆ ಕೋಪಗೊಂಡಿದ್ದ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರ್ದಾರ್ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಸರ್ದಾರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.