ಆಟಿಸಂ ಮಕ್ಕಳನ್ನು ಪ್ರೀತಿಸೋಣ: ಆಟಿಸಂ ಮಗುವಿನ ಪಾಲಕರಿಗೊಂದು ಕಿವಿಮಾತು!

ಆಟಿಸಂ (Autism)  ಮಗು ಬೆಳೆಯುವ ಹಂತದಲ್ಲಿ ಪೋಷಕರು  ತನ್ನ ಮಗು ಉಳಿದ ಮಕ್ಕಳಿಗಿಂತ ಭಿನ್ನವಾಗಿದೆ, ಎಂದು ತಿಳಿದನಂತರ ಪೋಷಕರಿಗೆ ಆ ಸತ್ಯವನ್ನು ಸ್ವೀಕರಿಸಲು ಮತ್ತು ತನ್ನ ಮಗುವನ್ನು ಬೆಳೆಸಲು ಸರಿಯಾದ  ವಿಧಾನ ಮತ್ತು ಸಂಬಂಧಿತ ಹೊಸ ವಿಷಯಗಳನ್ನು ಕಲಿತು (ಆಟಿಸಂ ಇರುವ ಮಕ್ಕಳನ್ನು ಬೆಳೆಸುವ ಮತ್ತು ಅವರನ್ನು ತರಬೇತಿ ನೀಡುವ ವಿಧಾನಗಳಿಂದ ) ಆ ಮಗುವನ್ನು ಬೆಳೆಸುವ ಅಗತ್ಯ ವಿರುತ್ತದೆ.

ಮಗುವಿನ ಭವಿಷ್ಯಕ್ಕಾಗಿ ಪೋಷಕರ ಮತ್ತು ಕುಟುಂಬದವರು ತುಂಬಾ ಸಹಕರಿಸಬೇಕಾಗುತ್ತದೆ. ಆದರೆ ಹೆಚ್ಚಿನ ಪೋಷಕರು  ತನ್ನ ಮಗು ಸ್ವಲ್ಪ ಭಿನ್ನವಾಗಿದೆ ಕಾಲಕ್ರಮೇಣ ಸರಿಯಾಗುವುದು ಎಂದು ಸಾಮಾನ್ಯ ಶಾಲೆಗೆ ಸೇರಿಸುತ್ತಾರೆ ಮತ್ತು ಅವರು ಸರಿಹೋಗಲಿ, ಪ್ರಪಂಚ ವನ್ನು ಅವರೇ ಅರಿತುಕೊಳ್ಳಲಿ ಎಂದು ಪ್ರಯತ್ನಿಸುತ್ತಾರೆ, ಇಂಥ ಸಂದರ್ಭಗಳಲ್ಲಿ ಆ ಮಗು ಸರಿ ಹೊಂದಬಹುದು ಅಥವಾ ಆ ಮಗು ಇತರ ಮಕ್ಕಳಂತೆ ಇರಲು ಸಾಧ್ಯವಾಗದೆ, ಶಾಲೆಯ ಮಕ್ಕಳಲ್ಲಿ ಬೆರೆಯದೇ ಖಿನ್ನರಾಗಬಹುದು ಮತ್ತು ಸೋತು ಹೋಗಬಹುದು ಅಥವಾ ಮುಂದೆಂದೂ ಗುಣಪಡಿಸಲಾಗದಂತಹ ಪರಿಸ್ಥಿತಿಯನ್ನು ತಲುಪಬಹುದು.

 ಆಟಿಸಂ ಶಿಕ್ಷಣ ವಿಧಾನಗಳನ್ನು ಅನುಸರಿಸಿ, ಜೊತೆಗೆ ಅಗತ್ಯವಿದ್ದಲ್ಲಿ ಆ ಮಗುವನ್ನು ಆಟಿಸಂ ಶಾಲೆಗೇ ಕಳಿಸಬೇಕಾಗಬಹುದು ಅದರಿಂದ ಮಗುವಿನ ಜೀವನ ಉತ್ತಮವಾಗುವ ಅವಕಾಶವಿರುತ್ತದೆ. ಆಟಿಸಂ ಇರುವ ಮಕ್ಕಳಲ್ಲಿ ಬಹು ವಿಧದ ಅದ್ಭುತ  ಪ್ರತಿಭೆಗಳಿರುತ್ತವೆ ಮತ್ತು ಸರಿಯಾದ ಶಿಕ್ಷಣದಿಂದ ಅದ್ಭುತ ಜೀವನ ವನ್ನು ನಿರೀಕ್ಷಿಸಬಬಹುದು. ಸರಿಯಾದ ಸಮಯಕ್ಕೆ ಆ ವಿಧದ ತರಬೇತಿಗಳನ್ನು ಕೊಡಿಸದಿದ್ದರೆ ಅದೇ ಮಕ್ಕಳು ಸಮಾಜಕ್ಕೆ ಹೊರೆಯಾಗುವ ಸಾಧ್ಯತೆಯಿರುತ್ತದೆ.

ಸಾಮಾನ್ಯ ಶಾಲೆಗೆ ಕಳಿಸಿದರೆ ಅವರ ಬೆಳವಣಿಗೆಗೆ ಬೇಕಾದಂತಹ ಪರಿಸ್ಥಿತಿ ಆ ಮಕ್ಕಳಿಗೆ ಸಿಗದೇ ಇರಬಹುದು ಮತ್ತು ಉಳಿದ ಮಕ್ಕಳು ತುಂಟಾಟದಿಂದಾಗಿ ಈ ಆಟಿಸಂ ಮಕ್ಕಳಿಗೆ ಸರಿಯಾಗಿ ನಡೆಸಿ ಕೊಳ್ಳದೇ ಇರಬಹುದು. ಸಾಮಾನ್ಯ ಶಾಲೆಗಳಿಂದ ಹೊರಗೆ ದಬ್ಬಲ್ಪಟ್ಟು ಆಟಿಸಂ ಶಾಲೆಗೆ ಬಂದು  ಸೇರುವಾಗ   ಸಮಯದಲ್ಲಿ ಆ ಮಗುವಿನ ಸುಧಾರಣೆಯಾಗುವ ಸಮಯ ಮೀರಿರಬಹುದು. ಆಟಿಸಂ ಅನ್ನು ಗುರುತಿಸಿದ ಕೂಡಲೇ ಎಳೆ ವಯಸ್ಸಿನಲ್ಲೆ ತರಬೇತಿ ಕೊಟ್ಟಿದ್ದಿದ್ದರೆ ಎಷ್ಟು ಸುಧಾರಣೆಗಳನ್ನು ಕಾಣಬಹುದೋ ಅಂತಹ ಸುಧಾರಣೆ ಗಳು ಕಾಣದೆ ಇರುವ ಸಾಧ್ಯತೆಗಳೂ ಇರುತ್ತವೆ.

ಮಗುವಿನ ಸರ್ವತೋಮುಖ ಬೆಳವಣಿಗೆ ಅಂದರೆ :

1.ದೈಹಿಕ ಬೆಳವಣಿಗೆ
2. ಚಲನಾ ಸಂಬಂಧಿತ ದೊಡ್ಡ ಹಾಗೂ ಸಣ್ಣ ಸ್ನಾಯುಗಳ ಬೆಳವಣಿಗೆ
3. ಸಂವೇದನಾ ಬೆಳವಣಿಗೆ
4. ಭಾವನಾತ್ಮಕ ಬೆಳವಣಿಗೆ
5. ಸಾಮಾಜಿಕ ಬೆಳವಣಿಗೆ

ಆದರೆ Autism ಇರುವ ಮಕ್ಕಳಲ್ಲಿ ಸರ್ವೇ ಸಾಮಾನ್ಯವಾಗಿ :
1. ಸಾಮಾಜಿಕ ಸಂವಹನದ ಕೊರತೆ.
2. ಸಾಮಾಜಿಕವಾಗಿ ಸರಿಯಾದ ಪ್ರತಿಕ್ರಿಯೆ ನೀಡುವ ಕೊರತೆ
3. ಪುನರಾವರ್ತಿತ ಅತೀ ಚಟುವಟಿಕೆ ವರ್ತನೆಗಳು (hyper activity )
ಮಗು ಮುಖಕ್ಕೆ ಮುಖ ಕೊಟ್ಟು ನೋಡದೇ ತನ್ನಷ್ಟಕ್ಕೇ ತನ್ನದೇ ಪ್ರಪಂಚದಲ್ಲಿ ಇದ್ದು, ಇತರರೊಂದಿಗೆ ಸ್ಪಂದಿಸಲು ತಿಳಿಯದೆ ಕಷ್ಟ ಪಡುತ್ತದೆ.
ಮಾತಿನ ತೊಂದರೆ, ಹೇಳಿದ್ದನ್ನೇ ಹೇಳುವುದು, ಕೇಳಿದ ಪ್ರಶ್ನೆಯನ್ನೇ ಪುನರಾವರ್ತಿಸುವುದು, ಈ ಎಲ್ಲಾ ಸಮಸ್ಯೆಗಳು ಇದ್ದರೆ ಮಗುವಿಗೆ ವಿಷಯ ಅರ್ಥವಾಗುತ್ತಾ ಇಲ್ಲ ಎಂದರ್ಥ.

ಮಗುವಿಗೆ ಸಮಸ್ಯೆ ಇದೆ ಎಂದು ಗುರುತಿಸಿದ ಕೂಡಲೇ ಮಗುವಿನ ಪಾಲಕರು ಕೂಡ ಮಗುವಿನ ಸಮಸ್ಯೆಯನ್ನು ಒಪ್ಪಿಕೊಳ್ಳುವುದು ಅತೀ ಮುಖ್ಯ. ಹೀಗೆ ಒಪ್ಪಿಕೊಂಡರೆ ಮಗುವಿಗೆ ಬೇಗನೆ ಶೀಘ್ರ ಮಧ್ಯಸ್ತಿಕ ಸಹಾಯ ದೊರೆತು ಮಗುವನ್ನು ಬೇಗನೆ ಮುಖ್ಯ ವಾಹಿನಿಗೆ ತರುವಲ್ಲಿ ಸಹಾಯವಾದಿತು.
ಪಾಲಕರು, ಇರುವ ಕೊರತೆಯನ್ನು ಗಮನಿಸಿ ಮಗುವಿಗೆ ತರಬೇತಿಯನ್ನು ಕೊಡಲು ಪ್ರಾರಂಭಿಸುವುದು, ಮತ್ತು ಮಗುವಿಗೆ ಮೊದಲ ಆದ್ಯತೆಯನ್ನು ಕೊಟ್ಟು ಆ ಮಗುವಿನ ನಿರ್ಧರಿತ ಸಮಯದಲ್ಲಿ ತರಬೇತಿ ಕೊಟ್ಟರೆ “ಸ್ವಲ್ಪ ಪ್ರಮಾಣದ ಆಟಿಸಂ” ಹೊಂದಿರುವ ಮಗು ಸಾಮಾನ್ಯ ಶಾಲೆಯಲ್ಲಿ ತನ್ನ ಶಿಕ್ಷಣವನ್ನು ಪಡೆಯಲು ಸಾಧ್ಯವಿದೆ.
ಮಗುವಿಗೆ ಪಾಲಕರು ಕೊಟ್ಟ ಪ್ರಾಮುಖ್ಯತೆಯನ್ನು ಶಾಲಾ ಪರಿಸರದಲ್ಲಿ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಸಾಮಾನ್ಯವಾಗಿ ಮಗುವಿನ ಜನನ ಕಾಲದಲ್ಲಿ  25% ಮೆದುಳಿನ ಬೆಳವಣಿಗೆ ಆಗಿದ್ದರೆ, ಇನ್ನು 25% ಮಗು ಹುಟ್ಟಿದ ಒಂದು ವರ್ಷದಲ್ಲಿ ಆಗುತ್ತದೆ. ನಂತರ 80% ದಷ್ಟು ಮೆದುಳಿನ ಬೆಳವಣಿಗೆ ಮಗುವಿನ ಮೂರು ವರ್ಷದೊಳಗೆ ಆಗುತ್ತದೆ. 90% ಬೆಳವಣಿಗೆ ಐದು ವರ್ಷದಲ್ಲಿ ಆಗುತ್ತದೆ.ಮೂರನೇ ವರ್ಷಕ್ಕೇ ಮಗುವಿನ  ಸಮಸ್ಯೆಯನ್ನು ಗುರುತಿಸಿದ್ದರು ಪಾಲಕರು ಒಪ್ಪಿಕೊಳ್ಳದೆ ಇದ್ದಾಗ ತರಬೇತಿ ಆರಂಭ ಆಗುವಲ್ಲಿ ತಡವಾಗಲು ಕಾರಣವಾಗುತ್ತದೆ. ಮಗುವಿನ ಬೆಳವಣಿಗೆಗೆ ಪೂರಕವಿಲ್ಲದ ಶಾಲೆಯಲ್ಲಿ ಸೇರ್ಪಡೆಸಿ ಮಗುವಿಗೆ ಮಾನಸಿಕ ಒತ್ತಡ ಉಂಟಾಗಿ, ಈ ಒತ್ತಡವನ್ನು ಮಗು ತನ್ನ ವಿಪರೀತ ವರ್ತನೆಯ ಮೂಲಕ ತೋರ್ಪಡಿಸುತ್ತದೆ. ಇಂತಹ ವರ್ತನೆ ಸಾಮಾನ್ಯ ಶಾಲೆಗಳಲ್ಲಿ ಸಮಸ್ಯೆ ಎಂದೆನಿಸಿಕೊಳ್ಳುತ್ತದೆ.  ಶಾಲಾ ಶಿಕ್ಷಕಿಯರು ಒಂದೆರಡು ವರ್ಷ ಸಾಮಾನ್ಯ ಶಾಲೆಯಲ್ಲಿ ಮಗುವನ್ನು ತರಬೇತಿ ಕೊಡಲು ಕಷ್ಟಪಟ್ಟು ನಂತರ ವಿಶೇಷ ಶಾಲೆಗೆ ಹಾಕಿ ಎಂದು ಹೇಳುತ್ತಾರೆ.  ಹೀಗೆ ಪಾಲಕರು ತುಂಬಾ ತಡವಾಗಿ ನಿರ್ಧಾರವನ್ನು ತೆಗೆದುಕೊಂಡು 8 ಅಥವಾ 10 ವರ್ಷಕ್ಕೆ ಮಗು ವಿಶೇಷ ಶಾಲೆಗೆ ಬರುವುದನ್ನು ಕಾಣಬಹುದು.ಇಂತಹ ಒಂದೆರಡು ಘಟನೆಗಳು  ಇಲ್ಲಿದೆ:
ಚಿಕ್ಕ ಮಕ್ಕಳು: ಆರು ವರ್ಷದ ಮಗುವಿಗೆ ತಾಯಿ ಕೈ ಉಗುರನ್ನು ತೆಗೆಯಲು ಕುಳಿತುಕೊಳ್ಳುತ್ತಾರೆ. ಮಗು ತಾಯಿಯ ಕೈಯಲ್ಲಿರುವ ಉಗುರಿನ ಕಟ್ಟರ್ (nail cutter) ನೋಡಿಯೇ ದೂರ ಓಡುತ್ತದೆ. ಮಗುವನ್ನು ಹಿಡಿದು ಉಗುರು ತೆಗೆದರೆ ಕಷ್ಟವಾಗ ಬಹುದು ಅಂತಾ ಹೆದರಿದ ತಾಯಿ, ಮಗು ಮಲಗಿದ್ದಾಗ ಉಗುರು ತೆಗೆಯಲು ಪ್ರಯತ್ನಿಸಿ ಅಸಫಲರಾಗುತ್ತಾರೆ. ಈ ಮಗು ಕೂದಲು ಕತ್ತರಿಸಲು ಕೂಡಾ ಬಿಡುವುದಿಲ್ಲ. ಮಗುವಿನ ತಾಯಿ ನಮ್ಮ ಆಟಿಸಂ ಶಾಲೆಗೆ ಬಂದಾಗ, Autism ಇರುವ ಮಕ್ಕಳಲ್ಲಿ ಇಂಥ ಸಮಸ್ಯೆಗಳು ಸರ್ವೇ ಸಾಮಾನ್ಯ ಎಂದು ತಾಯಿಗೆ ಒಂದು ಕಿವಿಮಾತು ಹೇಳಿದೆ. “ಪ್ರತಿದಿನ ಮಗು ಮಲಗುವಾಗ ರಾತ್ರಿ ತಲೆಗೆ ಬೆರಳುಗಳಿಂದ ಮಸಾಜ್ ಮಾಡಿ ಮಲಗಿಸಿ ಮತ್ತು ಮಲಗಿದ ನಂತರ ಕೈ ಯ ಉಗುರುಗಳಿಗೆ ಉಗುರಿನ ಅರದಿಂದ (nail filer) ಉಗುರನ್ನು ಉಜ್ಜಿ ಗಿಡ್ಡ ಮಾಡಿ, ” ಎಂದು ಹೇಳಿ ಕೆಲವೇದಿನಗಳಲ್ಲಿ  ಮಗುವಿನ ಸಮಸ್ಯೆ ಪರಿಹಾರವಾಗುತ್ತದೆ.

ಮಗು ಹೀಗೆ ವರ್ತಿಸಲು ಕಾರಣವಾದರೂ ಏನಿರಬಹುದು  ಎಂದು ಯೋಚಿಸಿದಾಗ ” ಮೊದಲು ಮಗುವಿಗೆ ಈ ರೀತಿಯ ಅನುಭವ ಹೊಸದಾಗಿತ್ತು, ಮತ್ತೆ ಇಷ್ಟವಿರಲಿಲ್ಲ. ಈಗ ಪ್ರತೀದಿನ ಈ ಅನುಭವ ಪಡೆದ ಕಾರಣ ಅದನ್ನು ಸರ್ವೇಸಾಮಾನ್ಯ ವಿಷಯವಾಗಿ ಮಗು ಸ್ವೀಕರಿಸಿತು ಎಂದು ಹೇಳಬಹುದು.

ಹತ್ತರಿಂದ ಹೆಚ್ಚಿನ ವಯಸ್ಸಿನ ಮಕ್ಕಳು :

ಉಳಿದ ಸಾಮಾನ್ಯ ಮಕ್ಕಳ ಹಾಗೇ ಹತ್ತು ವರ್ಷಕ್ಕೆ ಮಗುವಿಗೆ ದೈಹಿಕ ಬೆಳವಣಿಗೆಯು ಆಗಿ, ಮಾನಸಿಕ ತುಮಲಗಳು ಪ್ರಾರಂಭವಾಗುತ್ತದೆ. ಲೈಂಗಿಕ ಶಿಕ್ಷಣದ ಕೊರತೆಯಿಂದ ಸಾಮಾನ್ಯ ಶಾಲೆಯಲ್ಲಿ ಹೊಂದಿಕೊಳ್ಳಲು  ಸಾಧ್ಯವಾಗದೆ ಮತ್ತು ಮಗುವಿಗೆ ಮಾನಸಿಕವಾಗಿ ಒತ್ತಡ ಹೆಚ್ಚಾಗಿ ವರ್ತನೆಗಳು ಬೇರೆ ರೂಪದಲ್ಲಿ ಹೊರ ಬರುತ್ತವೆ. ಮಗು ಕಿರುಚುವುದು ಸಿಟ್ಟು ಮಾಡುವುದು ಹೇಳಿದ್ದನ್ನು ಕೇಳದೆ ಇರುವುದು  ಇವು ಸಾಮಾನ್ಯವಾಗುತ್ತದೆ.

ಎಲ್ಲ ವ್ಯಕ್ತಿಗಳಂತೆ ಆಟಿಸ್ಟಿಕ್ ವ್ಯಕ್ತಿಗಳು ಸಹ ಶೈಶಾವಸ್ಥೆ, ಬಾಲ್ಯಾವಸ್ಥೆ, ಪ್ರೌಢಾವಸ್ಥೆ,  ವಯಸ್ಕ, ಮುಂತಾದ ಹಂತಗಳನ್ನು ಕ್ರಮವಾಗಿ ಹಾದು ಹೋಗುತ್ತಾರೆ. ಆದರೆ ಸಮಾಜ ಒಪ್ಪುವಂಥ ಸಮರ್ಥ ರೀತಿಯಲ್ಲಿ ಲೈಂಗಿಕ ಭಾವನೆಗಳನ್ನು  ವ್ಯಕ್ತಪಡಿಸಲು ಇವರು ಅಸಮರ್ಥರಾಗಿರುತ್ತಾರೆ. ಆದ್ದರಿಂದ ಮುಟ್ಟುವುದು ತಬ್ಬಿ ಕೊಳ್ಳುವುದು ಮಾತನಾಡುವುದು, ಪರಿಸರದ ಅರಿವೇ ಇಲ್ಲದೆ ಹಸ್ತ ಮೈಥುನದ ರೀತಿಯಲ್ಲಿ ಭಾವನೆಗಳನ್ನು ಹೊರ ಹಾಕುತ್ತಾರೆ. ಹೀಗಾಗಿ ಎಲ್ಲರೆದುರಿಗೆ ಮುಜುಗರದ ಪರಿಸ್ಥಿತಿಗಳು ಉಂಟಾಗಿ ಮಾನಸಿಕ ಆಘಾತವನ್ನು ಅನುಭವಿಸುತ್ತಾರೆ.

ಉದಾಹರಣೆಗೆ ತರಗತಿಯಲ್ಲಿ ಸಹಪಾಠಿಗಳನ್ನು  ತಬ್ಬಿಕೊಳ್ಳುವುದು, ಕೆಲವರನ್ನು ಪದೇ ಪದೇ ಮುಟ್ಟುವುದು, ಪ್ರೀತಿಯನ್ನು ತನ್ನದೇ ರೀತಿಯಲ್ಲಿ ವ್ಯಕ್ತ ಪಡಿಸುವ ಪ್ರಯತ್ನದಲ್ಲಿ ತೊಡಗುತ್ತಾರೆ. ಆದರೆ ವಯಸ್ಸಿಗೆ ತಕ್ಕಂತೆ ಸಮಾಜದ ಕಟ್ಟಳೆಗಳನ್ನು ಇವರು ಪಾಲಿಸಬೇಕೆನ್ನುವ ಅರಿವು ಕೆಲವರಲ್ಲಿ ಇರುವುದಿಲ್ಲ.
ಈ ಎಲ್ಲ ಸಮಸ್ಯೆಗಳಲ್ಲಿ ಪೋಷಕರ ಪಾತ್ರ ನಿರ್ಣಾಯಕವಾಗಿದೆ. ಸಮಸ್ಯೆಗಳನ್ನು ಪೋಷಕರು ಮೊದಲೇ ತಿಳಿದಿದ್ದರೆ ಮಗುವಿನ ಬೆಳವಣಿಗೆ ಹಂತದಲ್ಲಿಯೇ ಸರಿಯಾದ ಲೈಂಗಿಕ ಶಿಕ್ಷಣವನ್ನು ನೀಡುವಲ್ಲಿ, ಕುಟುಂಬದ ಪ್ರತಿ ಸದಸ್ಯರು ತರಬೇತಿ ಮಾಹಿತಿ ಒದಗಿಸಿ ಕೊಡಬಹುದು. ಇಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಲೈಂಗಿಕ ಶಿಕ್ಷಣ ಕೊಡುವಲ್ಲಿ ಮೊದಲ ಶಿಕ್ಷಕರು. ಸಮಾಜದಲ್ಲಿ ಹೇಗೆ ವರ್ತಿಸಬೇಕು, ಲೈಂಗಿಕ ವರ್ತನೆಗಳ ಬಗ್ಗೆ ಅರಿವು ಮಗುವಿಗೆ ಅತಿ ಅಗತ್ಯದ ಶಿಕ್ಷಣವಾಗಿದೆ.

ಮಕ್ಕಳನ್ನು ಪ್ರೀತಿಸೋಣ:

ಮಗುವಿಗೆ ಅದರ ಬಗ್ಗೆ ಅರಿವು ಇಲ್ಲದೆ ಇರಬಹುದು ಅಥವಾ ಸರಿಯಾದ ಮಾಹಿತಿ ಇಲ್ಲದೆ ಇರಬಹುದು ಹೇಳಿಕೊಳ್ಳಲು ಆಗದೆ ಇರಬಹುದು.  ಪಾಲಕರಿಗೂ ಇದನ್ನು ತಿಳಿಸಿಕೊಡುವುದು ಕಷ್ಟವಾಗಬಹುದು, ಇಂಥ ಸಂದರ್ಭದಲ್ಲಿ ಪಾಲಕರು ತರಬೇತಿ ಪಡೆದ ಮನಶಾಸ್ತ್ರಜ್ಞರು ಅಥವಾ ಮನೋವೈದ್ಯರನ್ನು ಸಂಪರ್ಕಿಸಿ  ಸಮಾಲೋಚನೆಯಿಂದ ಮಕ್ಕಳಿಗೆ ಸೂಕ್ತ ಪರಿಹಾರ ಅಥವಾ ಸಮಾಧಾನವನ್ನು ಕಂಡುಕೊಳ್ಳಬಹುದು.

ಆಟಿಸಂ ಇರುವ ಮಕ್ಕಳಿಗೆ ತಮ್ಮ ಆಸೆಗಳನ್ನು ಸೂಕ್ತ ರೀತಿಯಲ್ಲಿ ವ್ಯಕ್ತಪಡಿಸಲು ಮತ್ತು ಸಮಸ್ಯೆಯಿಂದ ಹೊರಬರಲು ಹಾಗೂ ತಮ್ಮ ಸಮಸ್ಯೆಗಳಲ್ಲಿ ಪ್ರತಿ ಹೆಜ್ಜೆಗೂ ಪಾಲಕರು ಮತ್ತು ಶಿಕ್ಷಕಿಯರು ತಮ್ಮ ಜೊತೆಗೆ ಇದ್ದಾರೆ ಎಂದು ಆ ಮಕ್ಕಳಿಗೆ ಅನಿಸುವಂತಹ ವರ್ತನೆ ಇಡೀ ಸಮಾಜದಿಂದ ಬಂದರೆ ತುಂಬಾ ಸಂತಸದ ವಿಚಾರ.

-ಕೆ.ಪ್ರಭಾ
ವಿಶೇಷ ಶಿಕ್ಷಕಿ
ಮಾನಸ ವಿಶೇಷ ಶಾಲೆ ಪಾಂಬೂರು