ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಇನ್ನು ಮುಂದೆ ಛತ್ರಪತಿ ಸಂಭಾಜಿ ನಗರ ಮತ್ತು ಧಾರಾಶಿವ್ ನಗರ

ಮುಂಬೈ:ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ನಗರಗಳನ್ನು ಕ್ರಮವಾಗಿ ಛತ್ರಪತಿ ಸಂಭಾಜಿ ನಗರ ಮತ್ತು ಧಾರಾಶಿವ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ. ನಗರಗಳ ಮರುನಾಮಕರಣಕ್ಕೆ ಯಾವುದೇ ಆಕ್ಷೇಪಣೆಯಿಲ್ಲದ ಕಾರಣ ಪ್ರಸ್ತಾವನೆಯನ್ನು ಅನುಮೋದಿಸಿದೆ ಎಂದು ಸಚಿವಾಲಯ ಹೇಳಿದೆ.

Image

Image

ಫೆಬ್ರವರಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಒಸ್ಮಾನಾಬಾದ್ ಅನ್ನು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದರು. ಆದಾಗ್ಯೂ, ಔರಂಗಾಬಾದ್ ಅನ್ನು ಮರುನಾಮಕರಣ ಮಾಡುವ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದು ಅವರು ವರದಿ ಸಲ್ಲಿಸಿದ್ದರು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜಯ್ ವಿ ಗಂಗಾಪುರವಾಲಾ ಮತ್ತು ನ್ಯಾಯಮೂರ್ತಿ ಸಂದೀಪ್ ವಿ ಮರ್ನೆ ಅವರ ಪೀಠವು ಎರಡು ನಗರಗಳ ಮರುನಾಮಕರಣದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿತ್ತು. ಮರುನಾಮಕರಣಕ್ಕೆ ಆಕ್ಷೇಪಣೆ ಇಲ್ಲದ ಕಾರಣ ನಗರಗಳ ಹೆಸರನ್ನು ಬದಲಾಯಿಸಲಾಗಿದೆ.

ಶಿವಸೇನೆ ಮತ್ತು ಬಿಜೆಪಿ ಪಕ್ಷ ಎರಡೂ ನಗರಗಳ ಹೆಸರನ್ನು ಮರುನಾಮಕರಣ ಮಾಡಬೇಕೆಂದು ಬಹಳ ಹಿಂದಿನಿಂದಲೂ ಒತ್ತಾಯಿಸಿದ್ದವು. ಔರಂಗಾಬಾದ್ ಔರಂಗಜೇಬ್ ನ ಹೆಸರಿನಿಂದ ಮತ್ತು ಹೈದರಾಬಾದ್‌ನ ಕೊನೆಯ ದೊರೆ ಮೀರ್ ಉಸ್ಮಾನ್ ಅಲಿ ಖಾನ್ ನಿಂದ ಉಸ್ಮಾನಾಬಾದ್ ಹೆಸರು ಬಂದಿತ್ತು.

1988 ರಲ್ಲೇ ಶಿವಸೇನಾ ಮುಖ್ಯಸ್ಥ ದಿವಂಗತ ಬಾಳಾಸಾಹೇಬ್ ಠಾಕ್ರೆಯವರು ಮೊಘಲ್ ಚಕ್ರವರ್ತಿ ಔರಂಗಜೇಬನಿಂದ ಕೊಲ್ಲಲ್ಪಟ್ಟ ಛತ್ರಪತಿ ಶಿವಾಜಿಯ ಪುತ್ರ ಸಂಭಾಜಿಯ ಸ್ಮರಣಾರ್ಥ ಸಂಭಾಜಿ ನಗರ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದರು. ಅಲ್ಲಿಂದ ಮುಂದೆ ಕಾನೂನು ವಿಧಾನಗಳ ಮೂಲಕ ಪ್ರಸ್ತಾವನೆಯನ್ನು ತೆರವುಗೊಳಿಸಲಾಗಿ ಮಹಾವಿಕಾಸ್ ಅಘಾಡಿಯ ಅಧಿಕಾರಾವಧಿಯಲ್ಲಿ ಅನುಮೋದನೆ ದೊರೆತಿದ್ದು, ಇದೀಗ ಏಕನಾಥ ಶಿಂಧೆ ಸರಕಾರದಲ್ಲಿ ಎರಡೂ ನಗರಗಳ ಹೆಸರನ್ನು ಬದಲಾಯಿಸಿ ಮರುನಾಮಕರಣ ಮಾಡಿ ಆದೇಶ ಹೊರಡಿಸಲಾಗಿದೆ.