122 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಳೆ ದಾಖಲು: 1901 ರಿಂದೀಚೆಗೆ ಅತಿ ಹೆಚ್ಚು ತಾಪಮಾನ ಕಂಡ ತಿಂಗಳು; ಸೆಪ್ಟೆಂಬರ್ ನಲ್ಲಿ ಮಳೆ ಸಾಧ್ಯತೆ

ಹೊಸದಿಲ್ಲಿ: 1901 ರಿಂದ ಇಡೀ ದೇಶದಲ್ಲಿ ಈ ಬಾರಿ ಆಗಸ್ಟ್ ಅತ್ಯಂತ ಶುಷ್ಕ ಮತ್ತು ಬೆಚ್ಚನೆಯ ತಿಂಗಳಾಗಿದೆ. ಮಧ್ಯ ಭಾರತ ಮತ್ತು ದಕ್ಷಿಣ ಪರ್ಯಾಯದ್ವೀಪ ಪ್ರದೇಶದಾದ್ಯಂತ ಆಗಸ್ಟ್‌ನಲ್ಲಿ ಮಾನ್ಸೂನ್ ಮಳೆಯು 122 ವರ್ಷಗಳಲ್ಲಿ ಅತ್ಯಂತ ಕಡಿಮೆಯಾಗಿದೆ, ಇದು ಇತಿಹಾಸದಲ್ಲಿ ಅತ್ಯಂತ ಕೆಟ್ಟ ಮತ್ತು ಕೊರತೆಯಿರುವ ಮಾನ್ಸೂನ್ ತಿಂಗಳುಗಳಲ್ಲಿ ಒಂದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ ಹೇಳಿದೆ.

ಈ ಆಗಸ್ಟ್‌ನಲ್ಲಿ ದೇಶದಾದ್ಯಂತ 162.7 ಮಿಮೀ ಮಳೆಯಾಗಿದ್ದು, ಇದು ವಾಸ್ತವಿಕ 254.9 ಮಿಮೀ ಗಿಂತ ಕಡಿಮೆಯಾಗಿದೆ. ದೇಶದಲ್ಲಿ ಸರಾಸರಿ ಗರಿಷ್ಠ ಮತ್ತು ಸರಾಸರಿ ತಾಪಮಾನಗಳು 1901 ರಿಂದ ಅತಿ ಹೆಚ್ಚು ಎಂದು ದಾಖಾಲಾಗಿದೆ.

“ಎಲ್ ನಿನೋ ಪರಿಸ್ಥಿತಿಗಳು ಬಲಗೊಳ್ಳಲು ಪ್ರಾರಂಭಿಸಿರುವುದರಿಂದ ಮತ್ತು ಪ್ರತಿಕೂಲವಾದ ಮ್ಯಾಡೆನ್ ಜೂಲಿಯನ್ ಓಲಾಟದಿಂದಾಗಿ, ಆಗಸ್ಟ್ ಮಳೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು” ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

“ಸೆಪ್ಟೆಂಬರ್‌ನಲ್ಲಿ ಮಳೆಯು ದೀರ್ಘಾವಧಿಯ ಸರಾಸರಿಯ 91 ರಿಂದ 109% ರ ನಡುವೆ ಸಾಮಾನ್ಯವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಈಶಾನ್ಯ ಭಾರತದ ಹಲವು ಪ್ರದೇಶಗಳು, ಪೂರ್ವ ಭಾರತ, ಹಿಮಾಲಯದ ತಪ್ಪಲಿನಲ್ಲಿ ಮತ್ತು ಪೂರ್ವ-ಮಧ್ಯ ಮತ್ತು ದಕ್ಷಿಣ ಪರ್ಯಾಯ ಭಾರತದ ಕೆಲವು ಪ್ರದೇಶಗಳಲ್ಲಿ ಸಾಧಾರಣದಿಂದ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ದೇಶದ ಉಳಿದ ಭಾಗಗಳ ಹೆಚ್ಚಿನ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ ಬೀಳುವ ಸಾಧ್ಯತೆಯಿದೆ” ಎಂದು ಐಎಂಡಿ ಅಂದಾಜಿಸಿದೆ.

ಒಂದೆಂಡೆ ಅದಾಗಲೇ ನದಿಗಳು ಬತ್ತಿರುವ ದೃಶ್ಯಗಳು ಕಾಣುತ್ತಿವೆ. ಖಾರಿಫ್ ಬಿತ್ತನೆಯಲ್ಲಿ ಅಸಮ ಮತ್ತು ಅನಿಯಮಿತ ಮುಂಗಾರುಗಳ ಪರಿಣಾಮ ಈಗಾಗಲೇ ಗೋಚರಿಸುತ್ತಿದೆ. ಆಗಸ್ಟ್ 25 ರ ಹೊತ್ತಿಗೆ, ಒಟ್ಟಾರೆ ಖಾರಿಫ್ ಬಿತ್ತನೆಯು ಕಳೆದ ವರ್ಷದ ಮಟ್ಟವನ್ನು ಮೀರಿಸಿದೆ. ಪ್ರಮುಖ ಒತ್ತಡದ ಬಿಂದುವು ದ್ವಿದಳ ಧಾನ್ಯಗಳಾಗಿರುತ್ತದೆ, ಅಲ್ಲಿ ಬಿತ್ತನೆ ಇನ್ನೂ ಆರಂಭವಾಗಿಲ್ಲ. ದುರ್ಬಲ ಉತ್ಪಾದನೆಯು ಆಹಾರ ಹಣದುಬ್ಬರವನ್ನು ಹೆಚ್ಚಿಸಬಹುದು. ನಾವು FY24 ರ ಹಣದುಬ್ಬರವನ್ನು ಸರಾಸರಿ 5.7% ಕ್ಕೆ ಅಂದಾಜು ಮಾಡುತ್ತಿದ್ದೇವೆ ಎಂದು HDFC ಬ್ಯಾಂಕ್‌ನ ಹಿರಿಯ ಅರ್ಥಶಾಸ್ತ್ರಜ್ಞ ಅವ್ನಿ ಜೈನ್ ಹೇಳಿದ್ದಾರೆ.