ಕರವಾಳಿಯಾದ್ಯಂತ ನಾಗರ ಪಂಚಮಿ ತಯಾರಿ; ಫಲ‌ಪುಷ್ಪಗಳಿಗೆ ಹೆಚ್ಚಿದ ಬೇಡಿಕೆ

ಉಡುಪಿ/ ಮಂಗಳೂರು: ದ.ಕ.‌ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ನಾಗರಪಂಚಮಿ ಹಬ್ಬ ನಡೆಯಲಿದ್ದು, ಈ‌ ಹಿನ್ನಲೆಯಲ್ಲಿ ಭಾನುವಾರವೇ ನಗರದಾದ್ಯಂತ ಸಂಭ್ರಮ ಮನೆಮಾಡಿತ್ತು.
ನಾಗದೇವರಿಗೆ ಪ್ರಿಯವಾದ ಕೇದಿಗೆ, ಹಿಂಗಾರ, ಗೆಂದಾಳೆ ಸೀಯಾಳ, ಮಲ್ಲಿಗೆ ಹೂವುಗಳನ್ನು ಸಾರ್ವಜನಿಕರರು ಮುಗಿಬಿದ್ದು ಖರೀದಿಸುತ್ತಿದ್ದರು.
ಉಡುಪಿ ರಥಬೀದಿ, ಮಂಗಳೂರಿನ‌ ಪ್ರಮುಖ ಮಾರುಕಟ್ಟೆಗಳಲ್ಲಿ ಸೇರಿದಂತೆ ನಗರದ ವಿವಿಧೆಡೆ ಪೂಜಾ ಸಾಮಾಗ್ರಿಗಳ ಖರೀದಿ ಭರಾಟೆ ಜೋರಾಗಿದೆ.
ನಾಗರಪಂಚಮಿ ಪ್ರಯುಕ್ತ ಉಡುಪಿಯ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವರು ಮತ್ತು ನಾಗಬನದಲ್ಲಿ ನಾಗದೇವರಿಗೆ ತನು ಪೂಜೆ ನೆರವೇರಿಸಲಾಗುತ್ತದೆ. ತಾಂಗೋಡು, ಮಾಂಗೋಡು, ಮುಚ್ಲುಕೋಡು, ಅರಿತೋಡು ನಾಗಸನ್ನಿಧಿಯಲ್ಲಿ ಪೂಜೆ ನಡೆಯುತ್ತದೆ. ಕಡೆಕಾರ್‌ ಶ್ರೀ ಲಕ್ಷ್ಮೀನಾರಾಯಣ ಮಠ ಶ್ರೀನಾಗ ದೇವರ ಗುಡಿಯಲ್ಲಿ, ದೊಡ್ಡಣಗುಡ್ಡೆ ಸಗ್ರಿ ನೈಸರ್ಗಿಕ ನಾಗಬನ, ಉಡುಪಿ ಕಿದಿಯೂರು ಹೋಟೆಲ್‍ನ ಮುಂಭಾಗ ಇರುವ ನಾಗಬನ ಹಾಗೂ ಮಣಿಪಾಲ ಮಂಚಿಕರೆ ನಾಗಬನದಲ್ಲಿ
ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಾಗದೇವರಿಗೆ ಸೀಯಾಳ ಹಾಗೂ ಹಾಲಿನ ಅಭಿಷೇಕವನ್ನು ಮಾಡಲಾಗುತ್ತದೆ.
ನಾಗದೇವರ ಅಭಿಷೇಕಕ್ಕೆ ಸೀಯಾಳ ಹಾಗೂ ಹಾಲನ್ನು ಹೆಚ್ಚಾಗಿ ಬಳಸುತ್ತಾರೆ. ಅದರೊಂದಿಗೆ ಕೇದಿಗೆ, ಹಿಂಗಾರ, ಹೂ ಹಣ್ಣುಗಳನ್ನು ದೇವರ ಪೂಜೆಗೆ ಕೊಂಡೊಯ್ಯಲಾಗುತ್ತದೆ. ನಾಗರ ದೇವರಿಗೆ ತನು ಹಾಕಲು ಈ ಸಾಮಾಗ್ರಿಗಳನ್ನು ಅಗತ್ಯವಾಗಿದ್ದು, ಇವುಗಳನ್ನು ಎಷ್ಟು ಬೆಲೆಯಾದರೂ ಖರೀದಿಸುತ್ತಾರೆ. ಈ ಬಾರಿ ಕೇದಿಗೆ, ಹಿಂಗಾರ, ಎಳನೀರು ಹಾಗೂ ಮಲ್ಲಿಗೆ ದರಲ್ಲಿ ದುಪ್ಪಟ್ಟಾಗಿದೆ.
ಹಿಂಗಾರ ದರ 200ರ ಗಡಿ ದಾಟಿದೆ. ಸುವರ್ಣ ಕೇದಗೆ ದರ 250ರಿಂದ -300 ರೂ.ಗೆ ಏರಿದೆ. ಮಲ್ಲಿಗೆ ದರ ಏಕಾಏಕಿಯಾಗಿ ಗಗನಕ್ಕೇರಿದ್ದು ಶನಿವಾರ 1 ಸಾವಿರ ರೂಪಾಯಿಯ ಗಡಿ ದಾಟಿದೆ. ಒಂದು ಅಟ್ಟಿಗೆ 1050 ರೂ.ಗೆ ಮಾರಾಟ‌ ಮಾಡಲಾಗುತ್ತಿದೆ. ಗೆಂದಾಳೆ ಸಿಯಾಳಕ್ಕೆ 50 ದರವಿದೆ. ಸಾದ ಸಿಯಾಳ ಒಂದಕ್ಕೆ 40ರಿಂದ 50 ರೂ. ನಿಗದಿಗೊಳಿಸಲಾಗಿದೆ. ತೆಂಗಿನ ಕಾಯಿಗೆ 30ರಿಂದ 35 ರೂ. ದರ ಏರಿಕೆ ಆಗಿದೆ.
ಮಳೆಗಾಲ, ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಸಿಯಾಳ ಪೂರೈಕೆ ಕಡಿಮೆಯಾಗಿದ್ದು, ದರ ಏರಿಕೆಗೆ ಕಾರಣ ಎನ್ನುವುದು ವ್ಯಾಪಾರಿ  ಹನುಮಂತ ಅವರ ಮಾತು.