ಆ. 4ರಂದು ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ: ಪತ್ರಿಕೋದ್ಯಮ ಸಂವಾದ

ಉಡುಪಿ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪತ್ರಿಕೋದ್ಯಮ ಸಂವಾದ ಕಾರ್ಯಕ್ರಮ ಆಗಸ್ಟ್‌ 4ರಂದು ಬ್ರಹ್ಮಾವರ ಬಂಟರ ಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ  ಸಮಾರಂಭ ನಡೆಯಲಿದ್ದು, ಉಡುಪಿ ಶಾಸಕ ಕೆ. ರಘುಪತಿ ಭಟ್‌ ಕಾರ್ಯಕ್ರಮವನ್ನು ಉದ್ಘಾಟಿಸುವರು. ಕಾರ್ಯಕ್ರದಲ್ಲಿ‌ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ರವೀಂದ್ರನಾಥ್‌ ಶ್ಯಾನುಭಾಗ್‌ ‘ಕರ್ನಾಟಕ ಮಲ್ಲ’ ಪತ್ರಿಕೆಯ ಸಂಪಾದಕ ಚಂದ್ರಶೇಖರ್‌ ಪಾಲೆತ್ತಾಡಿ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ ಸಿ. ಕುಂದರ್‌, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್‌ ಪ್ರಸಾದ್‌ ಪಾಂಡೇಲು, ಪತ್ರಕರ್ತ ಪಂಜು ಗಂಗೊಳ್ಳಿ ಮೊದಲಾದವರು ಭಾಗವಹಿಸಲಿದ್ದಾರೆ.
ಅಂದು ಮಧ್ಯಾಹ್ನ 2.30ಕ್ಕೆ ‘ಪ್ರಸಕ್ತ ಕಾಲಘಟ್ಟದಲ್ಲಿ ಪತ್ರಿಕೋದ್ಯಮ’ ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಕಾಂಗ್ರೆಸ್‌ ಮುಖಂಡ ಬಿ.ಎಲ್‌. ಶಂಕರ್‌ ಹಾಗೂ ಪತ್ರಕರ್ತ ಅಜಿತ್‌ ಹನುಮಕ್ಕನವರ್‌ ಸಂವಾದ ಕಾರ್ಯಕ್ರಮ ನಡೆಸಿಕೊಡುವರು. ಸಂಜೆ 6 ಗಂಟೆಗೆ ಯಕ್ಷಗಾನ ನಾಟ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಘದ ಕೋಶಾಧಿಕಾರಿ ಮೋಹನ್‌ ಉಡುಪ, ಸಾಂಸ್ಕೃತಿಕ ಕಾರ್ಯದರ್ಶಿ‌ ಹರೀಶ್‌ ಕಿರಣ್‌ ತುಂಗ, ಕ್ರೀಡಾ ಕಾರ್ಯದರ್ಶಿ ಪ್ರವೀಣ್‌ ಮುದ್ದೂರು ಉಲಸ್ಥಿತರಿದ್ದರು.