ಕಾರ್ಕಳ: ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವ ವು ಜ. 27ರಿಂದ 31ರ ವರೆಗೆ ಜರಗಲಿದ್ದು ಇದರ ಸಿದ್ಧತೆ ಭರದಿಂದ ಸಾಗುತ್ತಿದೆ ಎಂದು ಬಸಿಲಿಕಾದ ನಿರ್ದೇಶಕ ಫಾ| ಜಾರ್ಜ್ ಡಿ’ಸೋಜಾ ಅವರು ತಿಳಿಸಿದ್ದಾರೆ.
ಜ. 20ರಂದು ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.5 ದಿವ್ಯ ಬಲಿಪೂಜೆಗಳು ಕೊಂಕಣಿಯಲ್ಲಿ,11 ಕನ್ನಡದಲ್ಲಿ ನಡೆಯಲಿವೆ. ಶಿವಮೊಗ್ಗ, ಬೆಳ್ತಂಗಡಿ, ಮೈಸೂರು, ಮಂಗಳೂರು ಹಾಗೂ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಬಲಿಪೂಜೆ ನೆರವೇರಿಸಲಿದ್ದಾರೆ. ಜ. 28ರಂದು ಪೂರ್ವಾಹ್ನ10ಕ್ಕೆ ಅಸ್ವಸ್ಥರಿಗಾಗಿ ಪೂಜೆ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ವಿವಿಧ ಸಿದ್ಧತೆ ನಡೆಯುತ್ತಿದೆ:
ಹಣ, ವಸ್ತುರೂಪದ ಹರಕೆ, ಮೋಂಬತ್ತಿ ಹರಕೆ ಸಲ್ಲಿಸಲು ಚರ್ಚ್ನ ಎಡಬದಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. 5 ಕಡೆಗಳಲ್ಲಿ ಕುಡಿಯುವ ನೀರು, 60 ಶೌಚಾಲಯ, ವಿವಿಧ ಭಾಗಗಳಿಂದ ಆಗಮಿಸುವವರಿಗೆ ಅಲ್ಲಲ್ಲಿ ಪಾರ್ಕಿಂಗ್, ಪಾಸ್ ಹೊಂದಿದವರಿಗೆ ಪರ್ಪಲೆಗುಡ್ಡೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಂಗಡಿ, ಸ್ಟಾಲ್ಗಳಲ್ಲಿ ದುಡಿಯುವ ಕಾರ್ಮಿಕರಿಗೆ ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಿಸಲು ಸ್ಥಳೀಯ ಆಡಳಿತಕ್ಕೆ ತಿಳಿಸಲಾಗಿದೆ ಅಂಗಡಿ ಮುಂಗಟ್ಟುಗಳ ಪರಿಸರದಲ್ಲಿ ಕೆಮರಾ ಅಳವಡಿಸಲು ಸ್ಥಳೀಯಾಡಳಿತಕ್ಕೆ ಸೂಚಿಸಲಾಗಿದೆ ವಾರ್ಷಿಕ ಮಹೋತ್ಸವದ ಸಂದರ್ಭ ನಡೆಯುವ ಭಿಕ್ಷಾಟನೆಯನ್ನು ಕಾನೂನಾತ್ಮಕವಾಗಿ ನಿಷೇಧಿಸಲಾಗಿದೆ. ಹಬ್ಬದ ಶುಕ್ರವಾರ ಭಿಕ್ಷುಕರಿಗೆ ನೀಡುತ್ತಿದ್ದ ಹಣ ವಿತರಣೆಯನ್ನು ನಿಷೇಧಿಸಲಾಗಿದ್ದು ಭಿಕ್ಷುಕರು ಕಂಡುಬಂದರೆ ನಿರಾಶ್ರಿತ ಕೇಂದ್ರಗಳಿಗೆ ಬಿಡಲಾಗುವುದು ಎಂದವರು ತಿಳಿಸಿದ್ದಾರೆ.
ಚರ್ಚ್ನ ಸಹಾಯಕ ನಿರ್ದೇಶಕ ಫಾ| ಜೆನ್ಸಿಲ್ ಆಳ್ವ, ಚರ್ಚ್ನ 18 ಆಯೋಗದ ಅಧ್ಯಕ್ಷ ರಿಚರ್ಡ್ ಪಿಂಟೊ, ಜಾನ್ ಡಿ’ಸಿಲ್ವಾ, ಸಂತೋಷ್ ಡಿ’ಸಿಲ್ವಾ, ಲೀನಾ ಡಿ’ಸಿಲ್ವಾ ಉಪಸ್ಥಿತರಿದ್ದರು.












