ರೈಲು ಪ್ರಯಾಣಿಕರೇ ಗಮನಿಸಿ! ರಾತ್ರಿ 11ರಿಂದ ಬೆಳಗ್ಗೆ 5 ರವರೆಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಬಂದ್

ನವದೆಹಲಿ: ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ವಿಚ್ ಆಫ್ ಮಾಡುವಂತೆ ರೈಲ್ವೆ ಮಂಡಳಿ ನಿರ್ದೇಶನ ನೀಡಿದೆ. ರೈಲ್ವೆ ಇಲಾಖೆಯ ಎಲ್ಲ ವಲಯಗಳಿಗೂ ಈ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ

ಪವರ್ ಬ್ಯಾಂಕ್ ಸ್ಫೋಟದಿಂದ ಎಚ್ಚೆತ್ತ ರೈಲ್ವೆ ಇಲಾಖೆ

ಇತ್ತೀಚೆಗೆ ರೈಲಿನಲ್ಲಿ ಮೊಬೈಲ್ ಚಾರ್ಜ್ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸ್ಫೋಟಗೊಂಡಿದ್ದು, ಬೋಗಿಯಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತ್ತು ಎನ್ನಲಾಗಿದೆ. ಇಂತಹ ಘಟನೆಗಳು ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸುವ ಅಪಾಯವನ್ನು ಹೆಚ್ಚಿಸುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ರಾತ್ರಿ ವೇಳೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಅಕ್ಟೋಬರ್ 26ರಂದು ಈ ಕುರಿತು ಎಲ್ಲ ರೈಲ್ವೆ ವಲಯಗಳಿಗೂ ಪತ್ರ ರವಾನಿಸಲಾಗಿದ್ದು, ನಿಯಮ ಪಾಲನೆಯಲ್ಲಿ ಯಾವುದೇ ವಿನಾಯಿತಿ ನೀಡಬಾರದು ಎಂದು ರೈಲ್ವೆ ಮಂಡಳಿ ಸೂಚಿಸಿದೆ

ನಿರಂತರ ಮೇಲ್ವಿಚಾರಣೆ, ಅನಿರೀಕ್ಷಿತ ತಪಾಸಣೆ

ರಾತ್ರಿ 11ರಿಂದ ಬೆಳಗ್ಗೆ 5ರವರೆಗಿನ ಆರು ಗಂಟೆಗಳ ಅವಧಿಯಲ್ಲಿ ರೈಲುಗಳ ಎಲ್ಲ ಬೋಗಿಗಳಲ್ಲಿನ ಚಾರ್ಜಿಂಗ್ ಪಾಯಿಂಟ್‌ಗಳು ಸ್ವಿಚ್ ಆಫ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಕುರಿತು ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸಬೇಕು. ಅಲ್ಲದೆ, ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿಗದಿತ ಸಮಯದಲ್ಲಿ ಸ್ಥಗಿತಗೊಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಅನಿರೀಕ್ಷಿತ ತಪಾಸಣೆ ನಡೆಸುವಂತೆಯೂ ಸೂಚಿಸಲಾಗಿದೆ

ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ ತೋರದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ.