ಡಿಜೆ ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರನ್ನು ಸಿಲುಕಿಸುವ ಪ್ರಯತ್ನ ಆಗುತ್ತಿದೆ: ಡಿ.ಕೆ. ಶಿವಕುಮಾರ್ ಆರೋಪ

ಬೆಂಗಳೂರು: ಪೊಲೀಸರು ಬಿಜೆಪಿ ಏಜೆಂಟರ್ ಅಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನು ಡಿಜೆ ಹಳ್ಳಿ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಆಗುತ್ತಿದೆ. ನಾವು ಇನ್ನೂ ಸುಮ್ಮನೆ ಕೂರಲ್ಲ, ಸರ್ಕಾರದ ಬದಲಾಗಿ ನಿಮ್ಮ ವಿರುದ್ಧ ಹೋರಾಟ ಮಾಡಬೇಕಾಗಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಗಳೂರು ಪೊಲೀಸ್ ಆಯುಕ್ತರ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿಜೆ ಹಳ್ಳಿ ಗಲಭೆಯಲ್ಲಿ ಯಾರೇ ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ಆಗಲಿ. ಆದರೆ ನಿಮಗೆ ನಂಬರ್ ಬೇಕೆಂದು ಅಮಾಯಕರನ್ನು ಬಂಧಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಪ್ರಚೋದನಕಾರಿ ಹೇಳಿಕೆ ಕೊಟ್ಟವರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದರು. ಗಲಭೆಯಲ್ಲಿ ಒಬ್ಬರಿಗೆ ಕರೆ ಮಾಡಬಹುದು. ಆದರೆ ಒಮ್ಮೆಲೆ ಐದು ಸಾವಿರ ಜನರಿಗೆ ಕರೆ ಮಾಡುವುದಕ್ಕೆ ಆಗುವುದಿಲ್ಲ ಎಂದರು.

ತನಿಖಾ ಸಂಸ್ಥೆಯ ಮೇಲೆ ನಮಗೆ ನಂಬಿಕೆ ಇಲ್ಲ. ಹಾಗಾಗಿ ಈ ಪ್ರಕರಣದ ಬಗ್ಗೆ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.