ಬೆಳ್ಳಂಪಳ್ಳಿಯಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಜೀವ ಬೆದರಿಕೆಯೊಡ್ಡಿ ಹಲ್ಲೆಗೆ ಯತ್ನ: ದೂರು ದಾಖಲು

ಉಡುಪಿ: ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಂಪಳ್ಳಿ ಎಂಬಲ್ಲಿ ಕೊರೊನಾ ವಾರಿಯರ್‌ಗಳಿಗೆ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ, ಜೀವ ಬೆದರಿಕೆಯೊಡ್ಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಳ್ಳಂಪಳ್ಳಿ ಆರೋಗ್ಯ ಉಪಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ವಸಂತಿ ಎಸ್. ಮತ್ತು ಕಲಾವತಿ ಹಾಗೂ ಸಿಬ್ಬಂದಿ ಜ್ಯೋತಿ ಕಿರಣ್, ಪ್ರತಿಮಾ, ಸಂತೋಷ್ ಮತ್ತು ಆಶಾ ಕಾರ್ಯಕರ್ತೆ ವಿಜಯ ಅವರು ಸೋಮವಾರ ಬೆಳ್ಳಂಪಳ್ಳಿಯ ಕಂಬ್ಲಮಜಲು ಗ್ರಾಮದಲ್ಲಿ ಕೊರೊನಾ ರೋಗಿಯ ಪ್ರಾಥಮಿಕ ಸಂಪರ್ಕ ಹೊಂದಿದ ಪತಿ ಸುರೇಂದ್ರ ಎಂಬವರ ಗಂಟಲದ್ರವದ ಮಾದರಿ ಸಂಗ್ರಹಿಸಲು ತೆರಳಿದ ವೇಳೆ ಈ ಘಟನೆ ನಡೆದಿದೆ.

ಸುರೇಂದ್ರ ಅವರು ‘ನೀವು ಕೊರೊನಾದಿಂದ ದುಡ್ಡು ಮಾಡಿದ್ದೀರಿ. ನಿಮಗೆ ಕೊರೊನಾ ಬಂದು ಸಾಯುತ್ತೀರಿ ನಿಂದಿಸಿದ್ದಾರೆ. ನಮಗೆ ಚಪ್ಪಲಿ ಹಾರವನ್ನು ಹಾಕಲು ಮುಂದದಾಗ ನಾವು ಅಲ್ಲಿಂದ ಹೊರಗೆ ಬಂದವು. ಆಗ ಆರೋಪಿ ರಾಡ್‌ನಿಂದ ಹೊಡೆಯಲು ಪ್ರಯತ್ನಿಸಿದ ಎಂದು ಕೊರೊನಾ ವಾರಿಯರ್ಸ್ ದೂರಿದ್ದಾರೆ.

ಅಲ್ಲದೆ ವಸಂತಿ ಎಂಬುವವರ ಸ್ಕೂಟರಿನ ಮೀಟರ್ ಪ್ಯಾನೆಲನ್ನು ಒಡೆದು ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ. ವಸಂತಿ ಅವರು ನೀಡಿದ ದೂರಿನಂತೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.