ಉಡುಪಿ: ದನ ಕಳವು ಮಾಡಿ ಕಸಾಯಿಖಾನೆಗೆ ಸಾಗಿಸಲು ಯತ್ನ: ಇಬ್ಬರ ಬಂಧನ – ಹಿರಿಯಡಕ ಪೊಲೀಸರಿಂದ ನಾಲ್ಕು ಜಾನುವಾರುಗಳ ರಕ್ಷಣೆ, ಟೆಂಪೊ ವಶಕ್ಕೆ

ಉಡುಪಿ: ಕಾರ್ಕಳ ತಾಲ್ಲೂಕಿನ ಕುಕ್ಕುಜೆ ಸಮೀಪದಿಂದ ಜಾನುವಾರುಗಳನ್ನು ಕಳವು ಮಾಡಿ ವಧೆಗಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ಹಿರಿಯಡಕ ಪೊಲೀಸರು, ನಾಲ್ಕು ಜಾನುವಾರುಗಳನ್ನು ರಕ್ಷಿಸಿ ಸಾಗಾಟಕ್ಕೆ ಬಳಸಿದ್ದ ಗೂಡ್ಸ್‌ ಟೆಂಪೊವನ್ನು ವಶಪಡಿಸಿಕೊಂಡಿದ್ದಾರೆ.
ಅ. 9ರಂದು ಸಂಜೆ 7.30ರ ಸುಮಾರಿಗೆ ಹರಿಖಂಡಿಗೆಯಿಂದ ಹಿರಿಯಡಕ ಕಡೆಗೆ ಕೆಎ 20 ಎಎ 5197 ನೋಂದಣಿ ಸಂಖ್ಯೆಯ ಗೂಡ್ಸ್‌ ಟೆಂಪೊದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಬೊಮ್ಮಾರಬೆಟ್ಟು ಗ್ರಾಮದ ಕೊಟ್ನಕಟ್ಟೆ ಬಳಿ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದರೂ ಚಾಲಕ ನಿಲ್ಲಿಸದೆ ಮುಂದೆ ಸಾಗಿದ್ದ. ಬಳಿಕ ಹಿರಿಯಡಕ ಠಾಣೆಯ ಎದುರಿನ ಅಂಜಾರು ಜಂಕ್ಷನ್‌ ಬಳಿ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದಾಗ ನಾಲ್ಕು ಜಾನುವಾರುಗಳು ಪತ್ತೆಯಾಗಿವೆ.
ವಾಹನದಲ್ಲಿದ್ದ ಕಾಪು ತಾಲ್ಲೂಕಿನ ಕುರ್ಕಾಲು ಗ್ರಾಮದ ಸರ್ಕಾರಿಗುಡ್ಡೆ ನಿವಾಸಿ ಅಬ್ದುಲ್ ಸತ್ತರ್ (54) ಹಾಗೂ ಇನ್ನಂಜೆ ಗ್ರಾಮದ ಮಾಳದಬೆಟ್ಟು ನಿವಾಸಿ ಯೋಗೀಶ ನಾಯ್ಕ್‌ (49) ಅವರನ್ನು ವಿಚಾರಣೆ ನಡೆಸಿದಾಗ, ಕಾರ್ಕಳ ತಾಲ್ಲೂಕಿನ ಕುಕ್ಕುಜೆ ಗ್ರಾಮದ ಪಲಬೆಟ್ಟು ನಿವಾಸಿ ಕೃಷ್ಣ ಪೂಜಾರಿ ಅವರ ಮನೆಯ ಸಮೀಪ ಮೇಯುತ್ತಿದ್ದ ಜಾನುವಾರುಗಳನ್ನು ಕಳವು ಮಾಡಿರುವುದಾಗಿ ತಿಳಿದುಬಂದಿದೆ. ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದಾಗಿ ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾನುವಾರುಗಳ ಕುತ್ತಿಗೆ ಮತ್ತು ಕಾಲುಗಳಿಗೆ ನೈಲಾನ್ ಹಗ್ಗ ಕಟ್ಟಿ, ಹಿಂಸಾತ್ಮಕವಾಗಿ ವಾಹನದಲ್ಲಿ ತುಂಬಿಸಿ, ಯಾವುದೇ ಪರವಾನಗಿ ಇಲ್ಲದೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ರಕ್ಷಿಸಲಾದ ಜಾನುವಾರುಗಳ ಅಂದಾಜು ಮೌಲ್ಯ ₹20 ಸಾವಿರ ಹಾಗೂ ವಶಪಡಿಸಿಕೊಂಡ ಟೆಂಪೊದ ಮೌಲ್ಯ ಸುಮಾರು ₹3 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 303(2), ಪ್ರಾಣಿಹಿಂಸೆ ಪ್ರತಿಬಂಧಕ ಕಾಯ್ದೆಯ ಕಲಂ 11(1)(ಡಿ) ಹಾಗೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯ ಕಲಂ 4, 5, 7 ಮತ್ತು 12ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.