ಮೀನುಗಾರಿಕೆಯಲ್ಲಿ ದೇಶದಲ್ಲಿಯೇ ಕರ್ನಾಟಕವನ್ನು ಪ್ರಥಮ ಸ್ಥಾನಕ್ಕೆ ತಲುಪಿಸಲು ಪ್ರಯತ್ನ: ಸಚಿವ ಕೋಟ

ಬೈಂದೂರು: ಮೀನುಗಾರಿಕೆಯಲ್ಲಿ ದೇಶದಲ್ಲಿಯೇ ಕರ್ನಾಟಕವನ್ನು ಪ್ರಥಮ ಸ್ಥಾನಕ್ಕೆ ತಲುಪಿಸಲು ಪ್ರಯತ್ನಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಮೀನುಗಾರಿಕಾ ಜಟ್ಟಿ ಪ್ರದೇಶಗಳಿಗೆ ಇಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ದೇಶದಲ್ಲಿ ಕಡಲ ಮೀನುಗಾರಿಕೆಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ಒಳನಾಡು ಮೀನು ಉತ್ಪಾದನೆಯಲ್ಲಿ 9ನೇ ಸ್ಥಾನದಲ್ಲಿದೆ. ಆದರೆ ಈಗ ಮುಖ್ಯಮಂತ್ರಿಗಳ ಪರಿಪೂರ್ಣ ಸಹಕಾರ ಹಾಗೂ ಮೀನುಗಾರಿಕೆಗೆ ಕೊಡುತ್ತಿರುವ ಉತ್ತೇಜನದಿಂದಾಗಿ ಇನ್ನು ಮೂರೇ ವರ್ಷದಲ್ಲಿ ದೇಶದಲ್ಲಿಯೇ ಕರ್ನಾಟಕ ಮೀನು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ತಲುಪುವ ಅವಕಾಶ ನಿಚ್ಚಳವಾಗಿದೆ ಎಂದು ಹೇಳಿದರು.
ಗಂಗೊಳ್ಳಿ ಮೀನುಗಾರಿಕಾ ಜಟ್ಟಿ ಕಾಮಗಾರಿ ವೀಕ್ಷಿಸಿದ ಸಚಿವರು 12 ಕೋಟಿ ರೂಪಾಯಿ ಮೊತ್ತದಲ್ಲಿ ಹೊಸದಾಗಿ ಜಟ್ಟಿ ನಿರ್ಮಾಣವಾಗಲಿದ್ದು, ಇದರಿಂದ ಗಂಗೊಳ್ಳಿ ಪ್ರದೇಶದ ಮೀನುಗಾರಿಕೆಗೆ ಹೊಸ ಕಾಯಕಲ್ಪವಾಗಲಿದೆ ಎಂದು ತಿಳಿಸಿದರು.
ಮರವಂತೆ ಬ್ರೇಕ್ ವಾಟರ್ ನಿರ್ಮಾಣವಾಗುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಬ್ರೇಕ್ ವಾಟರ್ ಎರಡನೇ ಹಂತದ ಕಾಮಗಾರಿಗೆ 85 ಕೋಟಿ ರೂ ಮೊತ್ತಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಎರಡನೇ ಹಂತದ ಕಾಮಗಾರಿಯ ಯೋಜನಾ ವರದಿ ಸಿದ್ಧವಾಗಿ, ಮೂರು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆಗಳು ಮುಗಿದು, ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಮೀನುಗಾರರಿಗೆ ಭರವಸೆ ನೀಡಿದರು.
ಕೊಡೇರಿ ಮೀನುಗಾರಿಕಾ ಜೆಟ್ಟಿ ಮತ್ತು ಉಪ್ಪುಂದ ನಾಡದೋಣಿ ತಂಗುದಾಣದ ಕಿರು ಜಟ್ಟಿಗಳ ವಿಸ್ತರಣೆ ಮಾಡಿ ಮೂಲಭೂತ ಸೌಕರ್ಯ, ವಿದ್ಯುತ್ ದೀಪ, ಕೊಂಡಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು. ಇದಕ್ಕೆ ಪೂರಕವಾಗಿ 4.5 ಕೋಟಿ ರೂಪಾಯಿ ಪ್ರಸ್ಥಾವನೆ ಹಣಕಾಸು ಇಲಾಖೆಯಲ್ಲಿ ಇದ್ದು, ವಾರಾಂತ್ಯದಲ್ಲಿ ಮಂಜುರಾತಿ ಪಡೆದು ಮೀನುಗಾರರಿಗೆ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.
 ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ,  ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬು ಹೆಗ್ಡೆ, ಶೋಭಾ ಪುತ್ರನ್, ಬೈಂದೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹೇಂದ್ರ ಪೂಜಾರಿ, ಸದಸ್ಯರಾದ ಪುಷ್ಪರಾಜ್ ಶೆಟ್ಟಿ, ಕರಣ್ ಪೂಜಾರಿ, ನಾರಾಯಣ ಕೆ. ಗುಜ್ಜಾಡಿ, ಸುರೇಂದ್ರ ಖಾರ್ವಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಇದ್ದರು.