ಉಡುಪಿ: ತಾಲೂಕಿನ ಆತ್ರಾಡಿ ಕಾಂಪ್ಲೆಕ್ಸ್ ನ ಮಹಾದೇವಿ ಸ್ಟೋರ್ ನ ಎದುರಿನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕದ್ದು ಪರಾರಿಯಾದ ಆರೋಪಿಯನ್ನು ಹಿರಿಯಡಕ ಪೊಲೀಸರು ಎರಡು ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಶರಾವತಿ ನಗರದ ನಿವಾಸಿ 37 ವರ್ಷದ ಕುಮಾರ ಯಾನೆ ಟೈಲರ್ ಕುಮಾರ್ ಎಂದು ಗುರುತಿಸಲಾಗಿದೆ.
ಆತ್ರಾಡಿ ಕಾಂಪ್ಲೆಕ್ಸ್ ನ ಮಹಾದೇವಿ ಸ್ಟೋರ್ ಮಾಲೀಕ ಪ್ರಸನ್ನ ಕುಮಾರ್ ಅವರು ಏ.3 ರಂದು ಸಂಜೆ 4.30ಕ್ಕೆ ಸ್ಟೋರ್ ಮುಂಭಾಗದಲ್ಲಿ ದ್ವಿಚಕ್ರ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಕುಮಾರ್, ಪ್ರಸನ್ನ ಅವರ ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹಿರಿಯಡ್ಕ ಕಡೆಗೆ ಪರಾರಿಯಾಗಿದ್ದನು. ಈ ಬಗ್ಗೆ ಹಿರಿಯಡ್ಕ ಠಾಣೆಗೆ ಪ್ರಸನ್ನ ಕುಮಾರ್ ದೂರು ನೀಡಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಹಿರಿಯಡ್ಕ ಪೊಲೀಸರು ಅಂಜಾರು ಗ್ರಾಮದ ಓಂತಿಬೆಟ್ಟು ಎಂಬಲ್ಲಿ ನಾಕಾಬಂಧಿ ನಿರ್ಮಿಸಿ ವಾಹನ ತಪಾಸಣೆ ನಡೆಸುತ್ತಿದ್ದರು. ಸಂಜೆ 5.50ರ ಸುಮಾರಿಗೆ ಕುಮಾರ್ ಆತ್ರಾಡಿ ಕಡೆಯಿಂದ ಬೈಕ್ ಅನ್ನು ಸವಾರಿ ಮಾಡಿಕೊಂಡು ಬರುತ್ತಿದ್ದು, ತಕ್ಷಣವೇ ಪೊಲೀಸರು ಬೈಕ್ ಅನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ ಆತ್ರಾಡಿಯಲ್ಲಿ ಅಂಗಡಿಯ ಎದುರು ನಿಲ್ಲಿಸಿದ ಬೈಕ್ ಅನ್ನು ಕಳವು ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಕೂಡಲೇ ಪೊಲೀಸರು ಆತನನ್ನು ಬಂಧಿಸಿ, ಆತನಿಂದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.