ಚಿಕಿತ್ಸೆಗೆ ಜರ್ಮನಿಗೆ ತೆರಳುತ್ತಿರುವ ಕೆಎಲ್ ರಾಹುಲ್ ಜೊತೆ ಪ್ರಯಾಣಿಸಲಿದ್ದಾರೆ ಬಾಲಿವುಡ್ ನಟಿ ಅಥಿಯಾ ಶೆಟ್ಟಿ?

ಬಲ್ಲ ಮೂಲಗಳ ಪ್ರಕಾರ, ಚಿಕಿತ್ಸೆಗಾಗಿ ಜರ್ಮನಿಗೆ ತೆರಳುತ್ತಿರುವ ಕೆಎಲ್ ರಾಹುಲ್ ಜೊತೆ ಪ್ರೇಯಸಿ ಅಥಿಯಾ ಶೆಟ್ಟಿ ಕೂಡಾ ಪ್ರಯಾಣಿಸಲಿದ್ದಾರೆ. ಜೂನ್ 16 ರಂದು ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಚಿಕಿತ್ಸೆಗಾಗಿ ಜರ್ಮನಿಗೆ ತೆರಳುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಭಾರತ- ಇಂಗ್ಲೆಂಡ್ ಪ್ರವಾಸದಿಂದ ರಾಹುಲ್ ಹೊರಗುಳಿದಿದ್ದಾರೆ. ತೊಡೆಸಂದು ಗಾಯಕ್ಕೆ ಒಳಗಾದ 30 ವರ್ಷ ವಯಸ್ಸಿನ ಕ್ರಿಕೆಟಿಗ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಶಸ್ತ ಚಿಕಿತ್ಸೆ ಬಳಿಕ ಸುಮಾರು ಒಂದು ತಿಂಗಳ ಕಾಲ ರಾಹುಲ್ ಜರ್ಮನಿಯಲ್ಲೇ ಉಳಿಯುತ್ತಾರೆ ಆ ಸಂದರ್ಭದಲ್ಲಿ ಆತ ಚೇತರಿಸಿಕೊಳ್ಳುವವರೆಗೆ ಅಥಿಯಾ ಕೂಡಾ ಅಲ್ಲೇ ಇರಲಿದ್ದಾರೆ ಎಂದು ಅವರಿಬ್ಬರಿಗೂ ನಿಕಟವಾಗಿರುವ ಮೂಲವು ಬಹಿರಂಗಪಡಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಚಿತ್ರ ನಟಿ ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಇಬ್ಬರೂ ರಜಾದಿನಗಳು, ಪ್ರವಾಸಗಳು ಮತ್ತು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ಅವರಿಬ್ಬರೂ ಅಧಿಕೃತವಾಗಿ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ ಹಾಗಂತ ಅಲ್ಲಗಳೆದೂ ಇಲ್ಲ. ಈ ವರ್ಷಾಂತ್ಯಕ್ಕೆ ಇಬ್ಬರೂ ವಿವಾಹವಾಗಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದರೂ, ಅಥಿಯಾ ತಂದೆ ಸುನೀಲ್ ಶೆಟ್ಟಿ ಮಾತ್ರ ಇಂತಹ ವದಂತಿಗಳಲ್ಲಿ ಹುರುಳಿಲ್ಲ ಎಂದು ಹೇಳಿದ್ದಾರೆ.