ಡಿ.24 ರಂದು “ಅಟಲ್ ಉತ್ಸವ” ರಾಷ್ಟ್ರಮಟ್ಟದ ಹೊನಲು‌ ಬೆಳಕಿನ ಕಬಡ್ಡಿ ಪಂದ್ಯಕೂಟ: ನಗರದಲ್ಲಿ ರಘುಪತಿ ಭಟ್ ಮಾಹಿತಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿ ಉಡುಪಿ ನಗರ ಹಾಗೂ ಗ್ರಾಮಾಂತರ ವತಿಯಿಂದ ಡಿ. 24ರಂದು ಸಂಜೆ 5ಗಂಟೆಗೆ “ಅಟಲ್ ಉತ್ಸವ” ರಾಷ್ಟ್ರಮಟ್ಟದ ಹೊನಲು‌ ಬೆಳಕಿನ ಕಬಡ್ಡಿ ಪಂದ್ಯಕೂಟ ಹಾಗೂ ಡಿ. 25ರಂದು ಸಂಜೆ 4ಗಂಟೆಗೆ ಬೂತ್ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಎರಡು ಕಾರ್ಯಕ್ರಮಗಳು ಉಡುಪಿ ಎಂಜಿಎಂ ಮೈದಾನದಲ್ಲಿ ನಡೆಯಲಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಯುವಜನ, ಕ್ರೀಡೆ ಹಾಗೂ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕ್ರೀಡೆ ಮತ್ತು ಯುವ ಜನಸಬಲೀಕರಣ ಸಚಿವ ಡಾ.ಕೆ ಸಿ ನಾರಾಯಣ ಗೌಡ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಈ ಪಂದ್ಯಾವಳಿಯಲ್ಲಿ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಾದ ದೆಹಲಿ, ಹರಿಯಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ರಾಜ್ಯಗಳ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನಗಳ ವಿಜೇತರಿಗೆ ಅನುಕ್ರಮವಾಗಿ 1 ಲಕ್ಷ, 75 ಸಾವಿರ, 50 ಸಾವಿರ, ಹಾಗೂ 25 ಸಾವಿರ ರೂ. ನಗದು ಬಹುಮಾನ, ಪ್ರಶಸ್ತಿ ಫಲಕಗಳನ್ನು ವಿತರಿಸಲಾಗುವುದು. ಈ ಪಂದ್ಯಾಟವನ್ನು ವೀಕ್ಷಿಸಲು ಸುಮಾರು 10 ರಿಂದ 15 ಸಾವಿರ ವೀಕ್ಷಕರು ಆಗಮಿಸುವ ನಿರೀಕ್ಷೆ ಇದ್ದು ಅದಕ್ಕೆ ಪೂರಕವಾದ ಗ್ಯಾಲರಿ ಮತ್ತು ಅಸನಗಳ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ಡಿ. 25ರಂದು ನಡೆಯುವ ಬೂತ್ ಸಂಗಮ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ದಿಕ್ಸೂಚಿ ಭಾಷಣ, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್ ಸಂಘಟನಾತ್ಮಕ ಮಾರ್ಗದರ್ಶನ ಕೊಡಲಿದ್ದಾರೆ. ಕಾರ್ಯಕ್ರಮದ ಒಂದು ಭಾಗವಾಗಿ ಜ. 7 ಮತ್ತು ಜ. 8ರಂದು ಯುವ ಸಂಗಮ, ಮಾತೃ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.

ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಷ್ಟ್ರೀಯ ಹಿಂದುಳಿದ ವರ್ಗ ಮೋರ್ಚಾ ಪ್ರ. ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮನೋಹರ ಕಲ್ಮಾಡಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಡಿ. ಶೆಟ್ಟಿ, ಮುಖಂಡರಾದ ದಿನಕರ ಬಾಬು, ದಿನೇಶ್ ಅಮೀನ್, ಮಂಜುನಾಥ್ ಮಣಿಪಾಲ, ಉಮೇಶ್ ನಾಯ್ಕ್, ಗಿರೀಶ್ ಅಂಚನ್, ಗಣೇಶ್ ಕುಲಾಲ್, ಸಚಿನ್ ಪೂಜಾರಿ, ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.