ಬೀಜಿಂಗ್: ವಾಯುವ್ಯ ಚೀನಾದ ದೂರದ ಪರ್ವತ ಪ್ರದೇಶದಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 400 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಭೂಕಂಪ ಪರಿಹಾರ ಕೇಂದ್ರ ಮಂಗಳವಾರದಂದು ತಿಳಿಸಿದೆ.
ಚೀನಾ ಭೂಕಂಪ ನೆಟ್ವರ್ಕ್ ಸೆಂಟರ್ (ಸಿಇಎನ್ಸಿ) ಪ್ರಕಾರ ಸೋಮವಾರ ರಾತ್ರಿ 11.59 ಕ್ಕೆ ಗನ್ಸು ಮತ್ತು ಕಿಂಗ್ಹೈ ಪ್ರಾಂತ್ಯಗಳಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ 10 ಕಿಲೋಮೀಟರ್ ಆಳದಲ್ಲಿತ್ತು. 6.2 ತೀವ್ರತೆಯ ಪ್ರಬಲ ಕಂಪನದ ಬಳಿಕ ನೆರೆಯ ಕ್ಸಿನ್ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದಲ್ಲಿ ಎರಡನೇ ಭೂಕಂಪ ಸಂಭವಿಸಿದೆ. ಮಂಗಳವಾರ ಮುಂಜಾನೆ 3.0 ಮತ್ತು ಅದಕ್ಕಿಂತ ಹೆಚ್ಚಿನ ತೀವ್ರತೆಯ ಒಟ್ಟು ಒಂಬತ್ತು ನಂತರದ ಕಂಪನಗಳು ದಾಖಲಾಗಿವೆ.
ವಿಪತ್ತು ಪ್ರದೇಶವು ಎತ್ತರದ ಪ್ರದೇಶದಲ್ಲಿದ್ದು, ಹವಾಮಾನವು ತಂಪಾಗಿರುತ್ತದೆ, ಭೂಕಂಪದ ಆಚೆಗಿನ ಅಂಶಗಳಿಂದ ಉಂಟಾಗುವ ದ್ವಿತೀಯ ವಿಪತ್ತುಗಳನ್ನು ತಡೆಗಟ್ಟಲು ರಕ್ಷಣಾ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಇದುವರೆಗೂ ನಾಪತ್ತೆಯಾದ ಪ್ರಕರಣಗಳು ಲಭ್ಯವಾಗಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ.
ಭೂಕಂಪವು ಸಾರಿಗೆ, ಸಂವಹನ ಮತ್ತು ಮೂಲಸೌಕರ್ಯಗಳಿಗೆ ಭಾರೀ ಹಾನಿಯನ್ನುಂಟುಮಾಡಿದೆ ಎಂದು ತಜ್ಞರು ಹೇಳಿದ್ದಾರೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಪ್ರಧಾನ ಮಂತ್ರಿ ಲಿ ಕಿಯಾಂಗ್ ಅವರು ಭೂಕಂಪದ ನಂತರ ಸಾವುನೋವುಗಳನ್ನು ಕಡಿಮೆ ಮಾಡಲು ಸಂಪೂರ್ಣ ರಕ್ಷಣಾ ಪ್ರಯತ್ನಗಳಿಗೆ ಆದೇಶ ನೀಡಿದ್ದಾರೆ.