ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಬೇಡಿಕೆ ಸಲ್ಲಿಸಿದ ಕುಪ್ಮಾ ಆಡಳಿತ ಮಂಡಳಿ ಪದಾಧಿಕಾರಿಗಳು

ಬೆಂಗಳೂರು: ಕರ್ನಾಟಕ ರಾಜ್ಯ ಖಾಸಗಿ ಅನುದಾನ ರಹಿತ ಪ.ಪೂ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ ಪದಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಮಾಡಬೇಕಾದ ಕೆಲವು ಬದಲಾವಣೆಗಳು ಹಾಗೂ ಇನಿತರ ವಿಷಯಗಳ ಕುರಿತಂತೆ ಬೆಂಗಳೂರಿನ ಸಮಗ್ರ ಶಿಕ್ಷಣದ ಸಭಾಂಗಣದಲ್ಲಿ ಸುದೀರ್ಘ ಚರ್ಚೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧೂ ರೂಪೇಶ್, ಹೆಚ್ಚುವರಿ ಕಾರ್ಯದರ್ಶಿ ಚಂದ್ರಶೇಖರ್, ಪಪೂ ಶಿಕ್ಷಣಾ ಇಲಾಖೆಜಂಟಿ ನಿರ್ದೇಶಕಿ ಶ್ವೇತಾ, ಮಾಜಿ ವಿಧಾನ ಪರಿಷತ್ ಸದಸ್ಯರ ಅರುಣ ಶಾಹಪೂರ ಹಾಗೂ ಸರಕಾರದ ಇತರೆ ಹಿರಿಯಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಈ ಕೆಳಗಿನ ವಿಷಯಗಳ ಕುರಿತಂತೆ ಚರ್ಚೆ ನಡೆಸಲಾಯಿತು.

೧)ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಾಲೇಜುಗಳ ಕಟ್ಟಡಗಳಿಗೆ (ಹಳೆಯ ಕಟ್ಟಡಗಳಿಗೆ) ಸರ್ಕಾರವು ಕಾರ್ಯರೂಪಕ್ಕೆ ತರಲಾಗದ ಯಾವುದೇ ರೀತಿ ಷರತ್ತುಗಳನ್ನು ವಿಧಿಸಬಾರದು. ಆದರೆ ಹೊಸತಾಗಿ ನಿರ್ಮಿಸುವ ಕಟ್ಟಡಗಳಿಗೆ ಸರ್ಕಾರವು ನಿಯಮಗಳನ್ನು ವಿಧಿಸಬಹುದು. ಅಂತೆಯೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಥವಾ ಉಪನಿರ್ದೇಶಕರು ಆಯಾ ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ಕಾಲೇಜುಗಳಿಗೆ ಭೇಟಿ ನೀಡಿ ಸುರಕ್ಷತೆಯ ಬಗ್ಗೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳುವುದರ ಬಗ್ಗೆ ಸಲಹೆಯನ್ನು ನೀಡಬಹುದು.

೨) ಪದವಿಪೂರ್ವ ಶಿಕ್ಷಣ ಇಲಾಖೆಯು ಶೈಕ್ಷಣಿಕ ವರ್ಷದ ಆರಂಭ, ಮುಕ್ತಾಯದ ಬಗ್ಗೆ ಕ್ಯಾಲೆಂಡರ್‌ ಆಫ್ ಈವೆಂಟ್ಸ್ (ವರ್ಷದಯೋಜನೆ) ಸಾಕಷ್ಟು ಮುಂಚಿತವಾಗಿ ತಯಾರಿಸುವುದು ಅಂತೆಯೇ ಅದನ್ನು ಅಂತಿಮಗೊಳಿಸುವ ಮೊದಲು ಕುಪ್ಮಾ ಸಂಸ್ಥೆಯೊಂದಿಗೆ ಚರ್ಚಿಸಿ ಸೂಕ್ತವಾದ ಸಲಹೆಗಳನ್ನು ಸ್ವೀಕರಿಸಿ ಕೊನೆಗೆ ಅಂತಿಮಗೊಳಿಸಿ ಬಿಡುಗಡೆಗೊಳಿಸುವುದು.

೩) ಪದವಿ ಪೂರ್ವ ಶಿಕ್ಷಣ ಇಲಾಖೆಯು ಪರೀಕ್ಷಾ ವೇಳಾಪಟ್ಟಿಯನ್ನು ತಯಾರಿಸುವಾಗ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಸಿಇಟಿ, ವಾರ್ಷಿಕ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಹೀಗೆ ಮುಂತಾದ ಪರೀಕ್ಷೆಗಳ ದಿನಾಂಕಗಳನ್ನು ನಿಗದಿ ಪಡಿಸುವ ಮೊದಲು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕುಪ್ಮಾ ಸದಸ್ಯರೊಂದಿಗೆ ಚರ್ಚಿಸಿ ನಿರ್ಧಾರಕೈಗೊಂಡರೆ ಉತ್ತಮ.

೪) ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಕಾಲೇಜುಗಳ ಆಡಳಿತ ಮಂಡಳಿಗಳು ಹೆಚ್ಚುವರಿ ವಿಭಾಗಕ್ಕಾಗಿ ಶುಲ್ಕವನ್ನು ಪಾವತಿಸುತ್ತಾರೆ. ಆ ಸಂದರ್ಭದಲ್ಲಿಒಂದು ವೇಳೆ ಹೆಚ್ಚುವರಿ ಶುಲ್ಕವನ್ನು ಪಾವತಿಸಿದಲ್ಲಿ ಆ ಮೊತ್ತವನ್ನು ಶಿಕ್ಷಣ ಸಂಸ್ಥೆಗೆ ಹಿಂತಿರುಗಿಸುವ ವ್ಯವಸ್ಥೆಯನ್ನು ಮಾಡುವುದು.

೫) ಪದವಿ ಪೂರ್ವ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷಗಳಲ್ಲಿ ಬೇರೆ ಬೇರೆ ಆಡಳಿತ ಮಂಡಳಿಗಳು ಹೊಸ ಕಾಲೇಜು, ಹೆಚ್ಚುವರಿ ವಿಭಾಗಕ್ಕಾಗಿ ಅಥವಾ ಹೊಸ ವಿಭಾಗಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದಾಗ ಸಾಕಷ್ಟು ಮುಂಚಿತವಾಗಿ ಅದನ್ನು ಪರಿಶೀಲಿಸಿ, ಅನುಮತಿಯನ್ನು ನೀಡುವುದು. ಅಂತೆಯೇ ಈ ಸಂಬಂಧವಾಗಿ ಈ ಪ್ರಕ್ರಿಯೆಯನ್ನು ಶೈಕ್ಷಣಿಕ ವರ್ಷದ ಪ್ರಾರಂಭಕ್ಕಿಂತ ಕನಿಷ್ಟ ಎರಡು ತಿಂಗಳು ಮುಂಚಿತವಾಗಿ ಅನುಮತಿಯನ್ನು ನೀಡುವುದರ ಬಗ್ಗೆ ಗಮನ ಹರಿಸುವುದು. ಇದಕ್ಕೆ ಕ್ಯಾಲೆಂಡರ್‌ ಆಫ್‌ ಈವೆಂಟ್ಸ್ ಅನ್ನು ರಚಿಸುವುದು ಉತ್ತಮ.

೬) ಪದವಿ ಪೂರ್ವ ಇಲಾಖೆಯು ಹೊರಡಿಸುವ ಸುತ್ತೋಲೆಗೆ ಸಂಬಂಧಪಟ್ಟಂತೆ ಸ್ಟಾಟ್ ಪೋರ್ಟಲ್‌ನಲ್ಲಿ ಮಾಹಿತಿಯನ್ನು ದಾಖಲೀಕರಣ ಮಾಡಲು ಅವಸರಿಸಬಾರದು. ಕಾಲೇಜುಗಳಿಗೆ ಸಾಕಷ್ಟು ಕಾಲಾವಕಾಶವನ್ನು ನೀಡಬೇಕು.

೭) ಕೆಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವಾಗ ಶಿಕ್ಷಕರಿಗೆ ಸೂಕ್ತವಾದ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡುವುದು ಆ ಮೂಲಕ ಪರೀಕ್ಷೆಯು ಸುಗಮವಾಗಿ ನಡೆಯುವಲ್ಲಿ ಶಿಕ್ಷಣ ಇಲಾಖೆ ಮಹತ್ವದ ಪಾತ್ರವನ್ನು ವಹಿಸಬೇಕು. ಪರೀಕ್ಷೆಗಳನ್ನು ಬರೆಯುವ ಯಾವುದೇ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿಯೂ ತೊಂದರೆಯಾಗಬಾರದು.

೮) ಸರ್ಕಾರದ ಸುತ್ತೋಲೆಯ ಅನ್ವಯ ಈಗಾಗಲೇ ಕಾಲೇಜಿನಲ್ಲಿರುವ ಹಳೆಯ ಬಸ್ಸುಗಳಿಗೆ ಅವಧಿ ಮೀರಿದಾಗ ಪರವಾನಗಿಯನ್ನು ಪರಿಷ್ಕರಿಸಲು ಸಾಧ್ಯವಾಗುದಿಲ್ಲ ಹಾಗಾಗೀ ಹದಿನೈದು ವರ್ಷ ಮೀರಿದ ಬಸ್ಸುಗಳಿಗೆ ಪರವಾನಗಿಯನ್ನು ನವೀಕರಿಸುವ ಬದಲು ಅದರ ಓಡಿದ ಕಿ.ಲೋ ಮೀಟರ್‌ ಆಧಾರದ ಮೇಲೆ ಆ ಸಮಸ್ಯೆಗೆ ಪರಿಹಾರವನ್ನು ನೀಡುವುದು.

೯) ಶಿಕ್ಷಣ ಇಲಾಖೆಯು ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಯ ವಾರ್ಷಿಕ ಪ್ರಶ್ನೆ ಪತ್ರಿಕೆಯನ್ನುತಯಾರಿಸುವಾಗ ಖಾಸಗಿ ಕಾಲೇಜಿನ ಅನುಭವಿ ಉಪನ್ಯಾಸಕರನ್ನು ನೇಮಿಸಿಕೊಂಡಲ್ಲಿ ಪ್ರಶ್ನೆ ಪತ್ರಿಕೆಯಲ್ಲುಂಟಾಗುವ ಗೊಂದಲ, ತಪ್ಪುಗಳನ್ನು ಸರಿಪಡಿಸಬಹುದು.

೧೦) ಸರಕಾರ ಹೈಸ್ಕೂಲ್ ಮತ್ತು ಪದವಿ ಹಂತಗಳಲ್ಲಿ ಪಠ್ಯೇತರ ಚಟುವಟಿಕೆಗಳ ರಾಜ್ಯಮಟ್ಟದ ಸ್ವರ್ಧೆ ಇತ್ಯಾದಿಗಳನ್ನು ನಡೆಸಿಕೊಂಡು ಬರುತ್ತಿದೆ. ಆದರೆ ಪದವಿ ಪೂರ್ವ ಹಂತದಲ್ಲಿಅಂತಹ ಯಾವುದೇ ರೀತಿಯ ಪಠ್ಯೇತರ ಚಟುವಟಿಕೆಗಳ ಸ್ವರ್ಧೆಗಳನ್ನು ನಡೆಸುತ್ತಿಲ್ಲ ಈ ಬಗ್ಗೆ ಶಿಕ್ಷಣ ಇಲಾಖೆಯು ಸೂಕ್ತವಾದ ಕ್ರಮವನ್ನು ಕೈಗೊಳ್ಳುವುದು.

೧೧) ವಿದ್ಯಾಸಂಸ್ಥೆಗಳ ಮೇಲೆ ಭರವಸೆಯಿಟ್ಟು ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ ಹಾಗಾಗಿ ಅವರಿಗೆ ನ್ಯಾಯ ಒದಗಿಸುವ ಸಲುವಾಗಿ ಶಿಕ್ಷಣದಲ್ಲಿ ಪರಿಣಾಮ ಕಾರಿಯಾಗಿ ವಿಷಯವನ್ನು ಬೋಧಿಸುವುದಕ್ಕಾಗಿ ಆಯಾ ವಿಷಯಗಳಲ್ಲಿ ತಜ್ಞಉಪನ್ಯಾಸಕರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಕೋಚಿಂಗ್‌ನ್ನು ನೀಡಬೇಕಾಗುತ್ತದೆ. ಆಗ ಮಾತ್ರವೇ ಸ್ಪರ್ಧಾತ್ಮಕ ಪರೀಕ್ಷೆಗಳಾಗಿರುವ ಕೆ-ಸಿಇಟಿ, ನೀಟ್, ಜೆಮೈನ್ ನಂತಹ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ದಾಖಲಿಸಲು ಸಾಧ್ಯ ಹಾಗಾಗಿ ತಾವು ಈ ಬಗ್ಗೆ ಖಾಸಗಿ ವಿದ್ಯಾಸಂಸ್ಥೆಗಳಿಗೆ ಕೋಚಿಂಗ್‌ನ್ನು ಮಾಡಬಾರದೆನ್ನುವ ಯಾವುದೇ ಷರತ್ತನ್ನು ವಿಧಿಸಬಾರದು.

೧೨) ಪದವಿ ಪೂರ್ವ ವಿಜ್ಞಾನ ವಿಭಾಗದಲ್ಲಿ ಇದ್ಯಾರ್ಥಿಗಳು ನೀಟ್ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಗಣಿತ ಶಾಸ್ತ್ರ ಮುಖ್ಯವಲ್ಲ. ಮಾತ್ರವಲ್ಲದೆ ಅನೇಕ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ ಅತ್ಯಂತ ಕ್ಲಿಷ್ಟಕರವಾಗಿರುವುದರಿಂದ ಅಂತಹ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯವಾಗಿ ಗಣಿತದ ಬದಲಿಗೆ ಮನಶಾಸ್ತ್ರ ಮತ್ತು ಭಾರತದ ನಾಡಿಯಾದ ತತ್ವಶಾಸ್ತ್ರವನ್ನು ಅಧ್ಯಯನ ಮಾಡಲು ಅನುವು ಮಾಡಬೇಕು.

ಈ ಎಲ್ಲಾ ಬೇಡಿಕೆಯನ್ನು ಹಂತ ಹಂತವಾಗಿ ಈಡೇರಿಸುವ ಭರವಸೆಯನ್ನು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೀಡಿದ್ದು, ಸಭೆಯಲ್ಲಿ ಕುಪ್ಮಾದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ, ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್.ನಾಯಕ್, ಉಪಾಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಯುವರಾಜ್‌ಜೈನ್, ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ನಟೋಜ, ಕೋಶಾಧಿಕಾರಿ ರಮೇಶ ಕೆ ಉಪಸ್ಥಿತರಿದ್ಧರು.