ಮಂಗಳೂರು: ಗೋ ಹತ್ಯೆ ನಡೆಸುವವರ ವಿರುದ್ದ ಆಸ್ತಿ ಮುಟ್ಟುಗೋಲು ಅಸ್ತ್ರ ಪ್ರಯೋಗಕ್ಕೆ ಸಿದ್ದತೆ ನಡೆದಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರಥಮವಾಗಿ ಜಾರಿಗೆ ಬರಲಿದೆ. ಮಂಗಳೂರು ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈಗಾಗಲೇ ಪ್ರಕ್ರಿಯೆ ಶುರು ಮಾಡಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಗೋ ಹತ್ಯೆ ಮತ್ತು ಗೋಮಾಂಸ ಮಾರಾಟ ಪ್ರಕರಣದಲ್ಲಿ ಈ ಪ್ರಕ್ರಿಯೆ ಶುರುವಾಗಿದೆ. ಕಳೆದ ಭಾನುವಾರ ಅರ್ಕುಳದಲ್ಲಿ ಕಸಾಯಿಖಾನೆಗೆ ದಾಳಿ ನಡೆಸಿ 95 ಕೆ.ಜಿ ಗೋ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಖಾಲಿದ್ ಎಂಬವರ ಶೆಡ್ ನಲ್ಲಿ ಬಾಶಿತ್ ಎಂಬಾತನಿಂದ ಗೋ ಹತ್ಯೆ ನಡೆಯುತ್ತಿತ್ತು.
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಸೂಚನೆ ಮೇರೆಗೆ ಕಂದಾಯ ಇಲಾಖೆಯಿಂದ ಆಸ್ತಿ ಮುಟ್ಟುಗೋಲು ಅಸ್ತ್ರ ಪ್ರಯೋಗಕ್ಕೆ ತಯಾರಿ ನಡೆದಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಾಂ 8 (5) ಅಡಿಯಲ್ಲಿ ಪ್ರಕ್ರಿಯೆ ಶುರುವಾಗಿದ್ದು, ಆರೋಪಿಗಳ ಸ್ವತ್ತು, ಅಕ್ರಮ ಕಸಾಯಿ ಖಾನೆಯ ಜಾಗ, ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನ ಮುಟ್ಟುಗೋಲು ಪ್ರಕ್ರಿಯೆ ನಡೆಯಲಿದೆ. ಜು.12 ರಂದು ಮಂಗಳೂರು ಎಸಿ ಕೋರ್ಟ್ ಗೆ ವಿಚಾರಣೆಗೆ ಹಾಜರಾಗಲು ಆರೋಪಿಗಳಿಗೆ ನೋಟೀಸ್ ನೀಡಲಾಗಿದ್ದು ಗೋ ಹತ್ಯೆಗೆ ಬಳಸಿದ ಸೊತ್ತುಗಳು ಹಾಗೂ ಇಡೀ ಜಾಗ ಸರ್ಕಾರದ ವಶಕ್ಕೆ ಪಡೆಯಲು ಪ್ರಕ್ರಿಯೆ ಶುರು ಮಾಡಲಾಗಿದೆ.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಾಂ 8 (5) ಅಡಿಯಲ್ಲಿ ಕಾಯ್ದೆಯನ್ನು ಉಲ್ಲಂಘಿಸಿ ಗೋಹತ್ಯೆ, ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿ ಖಾನೆಯನ್ನು ನಡೆಸುತ್ತಿದ್ದ ಆರೋಪಿಗಳ ಸ್ವತ್ತುಗಳನ್ನು, ಅಕ್ರಮ ಕಸಾಯಿ ಖಾನೆ ಆಗುತ್ತಿದ್ದ ಜಾಗ, ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಮುಟ್ಟುಗೋಲು ಹಾಕಲು ಸಂಪೂರ್ಣ ಗೋಹತ್ಯಾ ನಿಷೇಧ ಕಾಯ್ದೆಯಲ್ಲಿ ಅಧಿಕಾರ ನೀಡಲಾಗಿದೆ.
ವರದಿ: ಏಷ್ಯಾ ನೆಟ್ ಸುವರ್ಣ ನ್ಯೂಸ್