ಅಸ್ಸಾಂ: ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ಪತ್ತೆ; ಮೂವರು‌ ಅಧಿಕಾರಿಗಳ ಅಮಾನತು

ನವದೆಹಲಿ: ಅಸ್ಸಾಂನಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರ ಕಾರಿನಲ್ಲಿ ಇವಿಎಂಗಳನ್ನು ಸಾಗಿಸಿರುವ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಶುಕ್ರವಾರ ನಾಲ್ವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತು ಮಾಡಿದೆ.

ಗುರುವಾರ ಎರಡನೇ ಹಂತದ ಮತದಾನ ಮುಕ್ತಾಯವಾದ ಬಳಿಕ ಮತಗಟ್ಟೆ ಅಧಿಕಾರಿಗಳು ಇವಿಎಂ ಯಂತ್ರಗಳನ್ನು ಅಧಿಕೃತ ವಾಹನದಲ್ಲಿ ಸಾಗಿಸುವಾಗ ಅಡಚಣೆ ಎದುರಾಗಿದೆ. ಅವರ ಕಾರು ಮಾರ್ಗ ಮಧ್ಯೆ ಕೆಟ್ಟು ನಿಂತಿದ್ದರಿಂದ ಅಧಿಕಾರಿಗಳು ಹಿಂದೆ ಬರುತ್ತಿದ್ದ ವಾಹನದ ಸಹಾಯ ಕೋರಿ, ಆ ವಾಹನದಲ್ಲಿ ಸಂಚಾರ ಮುಂದುವರಿಸಿದ್ದರು ಎಂದು ಎನ್ನಲಾಗಿದೆ.

ನಿನ್ನೆ ರಾತ್ರಿಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿದಾಡುತ್ತಿದ್ದು, ಪಥರ್‌ಕಾಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೆಂದು ಪೌಲ್‌ ಅವರಿಗೆ ಸೇರಿದ ಕಾರಿನಲ್ಲಿ ಇವಿಎಂಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಕಾರನ್ನು ಸ್ಥಳೀಯ ಜನರ ಗುಂಪು ಹಿಡಿದು ನಿಲ್ಲಿಸಿ, ಚಾಲಕನ್ನು ಪ್ರಶ್ನಿಸಿದೆ.

ಸಾರಿಗೆ ಶಿಷ್ಟಾಚಾರದ ಉಲ್ಲಂಘನೆಗಾಗಿ ಮತಗಟ್ಟೆ ಅಧಿಕಾರಿಗೆ ಷೊಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಮತಗಟ್ಟೆ ಅಧಿಕಾರಿ ಮತ್ತು ಇತರೆ ಮೂವರು ಸಿಬ್ಬಂದಿಯನ್ನು ಅಮಾನತಿನಲ್ಲಿಡಲಾಗಿದೆ. ಇವಿಎಂಗಳಿಗೆ ಯಾವುದೇ ಹಾನಿಯಾಗದಿದ್ದರೂ, ಮತಗಟ್ಟ ಸಂಖ್ಯೆ 149ರಲ್ಲಿ ಮರುಮತದಾನ ನಡೆಸಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.