ಹರೀಶ್‌ ಪೂಂಜ ಪರವಾಗಿ ಬೃಹತ್ ರೋಡ್‌ ಶೋ ಮೂಲಕ ಮತಯಾಚಿಸಿದ ಹಿಂದೂ ಫಯರ್‌ ಬ್ರಾಂಡ್‌ ಖ್ಯಾತಿಯ ಅಸ್ಸಾಂ ಮುಖ್ಯಮಂತ್ರಿ

ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಹರೀಶ್‌ ಪೂಂಜ ಅವರ ಪರವಾಗಿ ಹಿಂದೂ ಫಯರ್‌ ಬ್ರಾಂಡ್‌ ಖ್ಯಾತಿಯ, ಬೆಂಕಿ ಚೆಂಡಿನ ಮಾತುಗಳಿಂದ ಪ್ರಸಿದ್ಧಿ ಪಡೆದಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ ಅವರು‌ ಇಂದು ದಿನಾಂಕ 06.05.2023 ರಂದು ಉಜಿರೆಯಲ್ಲಿ ಬೃಹತ್‌ ರೋಡ್ ಶೋ ಮೂಲಕ ಮತಯಾಚಿಸಿದರು.

ಉಜಿರೆ ಎಸ್‌ಡಿಎಂ ಕಾಲೇಜು ಮೈದಾನದಿಂದ ಆರಂಭಗೊಂಡು ಜನಾರ್ಧನ ಸ್ವಾಮಿ ದೇವಸ್ಥಾನದ ಬೀದಿಯವರೆಗೆ ಬೃಹತ್‌ ರೋಡ್‌ ಶೋ ನಡೆಯಿತು. ಉಜಿರೆ ಮತ್ತು ಧರ್ಮಸ್ಥಳ ಜಿಲ್ಲಾ ಪಂಚಾಯತ್‌ ಕ್ಷೇತ್ರ ವ್ಯಾಪ್ತಿಯ ಮತದಾರರನ್ನು ಗಮನದಲ್ಲಿಟ್ಟುಕೊಂಡು ಆಯೋಜಿಸಲಾದ ಈ ಬೃಹತ್‌ ರೋಡ್‌ ಶೋನಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಕಾರ್ಯಕರ್ತರು, ಮತದಾರರು ಭಾಗಿಯಾದರು.

ಬೆಳ್ತಂಗಡಿ ತಾಲೂಕಿನಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಂದು ಮಾತನಾಡುತ್ತಿವೆ. ಈ ಬಾರಿ ಗೆಲ್ಲಿಸಿದರೆ ದೇಶಕ್ಕೆ ಮಾದರಿಯಾಗಿ ಬೆಳ್ತಂಗಡಿ ತಾಲ್ಲೂಕನ್ನು ಅಭಿವೃದ್ಧಿಗೊಳಿಸುತ್ತೇನೆ – ಹರೀಶ್‌ ಪೂಂಜ

ದೇಶದ ಯಾವುದೇ ಮೂಲೆಗೆ ತೆರಳಿದರು ನರೇಂದ್ರ ಮೋದಿ ಅವರ ಪ್ರಭಾವವಿದೆ. ಬೆಳ್ತಂಗಡಿ ತಾಲ್ಲೂಕಿನ ಮೂಲೆಮೂಲೆಯಲ್ಲೂ ಯುವ ಶಾಸಕ ಹರೀಶ್‌ ಪೂಂಜ ಅವರ ಪ್ರಭಾವಿದೆ. ಬೆಳ್ತಂಗಡಿಯಲ್ಲಿ ಅಭಿವೃದ್ಧಿಯ ಹೊಳೆ ಹರಿಸಿರುವ ಶಾಸಕ ಹರೀಶ್‌ ಪೂಂಜ ಅವರನ್ನು 60 ಸಾವಿರಕ್ಕೂ ಅಧಿಕ ಮತಗಳಿಂದ ಬೆಳ್ತಂಗಡಿಯ ಜನತೆ ಗೆಲ್ಲಿಸಬೇಕು. ಅಂಬೇಡ್ಕರ್ ಅವರು ಪರಿಶಿಷ್ಟರಿಗೆ ಹಿಂದುಳಿದವರಿಗೆ ಒಬಿಸಿ ಸೇರಿದಂತೆ ಅಗತ್ಯ ಸಮುದಾಯಗಳಿಗೆ ಮಾತ್ರ ಮೀಸಲಾತಿ ಒದಗಿಸಿ ಎಂದು ಹೇಳಿದ್ದರು,  ಆದರೆ ಕಾಂಗ್ರೆಸ್ ಪಕ್ಷ ಇಂದು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಿದೆ. ಆ ಮೀಸಲಾತಿಯನ್ನು ನಾವು ತೆಗೆದಿದ್ದೇವೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮತಾಂತರ ವಿರೋಧಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆಯನ್ನು ಅಧಿಕಾರಕ್ಕೆ ಬಂದಕೂಡಲೇ ತೆಗೆದುಹಾಕುತ್ತೇವೆ ಎಂದಿದೆ. ಇಂತಹ ಹಿಂದೂ ವಿರೋಧಿ ಕಾಂಗ್ರೆಸ್‌ ಪಕ್ಷವನ್ನು ಜನತೆ ತಿರಸ್ಕರಿಸಬೇಕು. ಬೆಳ್ತಂಗಡಿಯಲ್ಲಿ ಯುವ ನಾಯಕ ಹರೀಶ್‌ ಪೂಂಜ ಅವರನ್ನು ಗೆಲ್ಲಿಸಿ – ಹಿಮಾಂತ್‌ ಬಿಸ್ವಾ ಶರ್ಮಾ

ರೋಡ್‌ ಶೋನಲ್ಲಿ ಪರಿಷತ್‌ ಮಂಡಲ ಅಧ್ಯಕ್ಷರಾದ ಜಯಂತ್‌ ಕೋಟ್ಯಾನ್‌, ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ಮಾಜಿ ಮಂಡಲ ಅಧ್ಯಕ್ಷರಾದ ಕುಶಾಲಪ್ಪ ಗೌಡ, ಬಿರುವೆರ್‌ ಕುಡ್ಲ ಸಂಘಟನೆಯ ಸ್ಥಾಪಕರಾದ ಉದಯ್‌ ಪೂಜಾರಿ ಮತ್ತು ಪಕ್ಷದ ಪದಾಧಿಕಾರಿಗಳು, ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.