ಮಂಗಳೂರು: ಮಾಂಡ್ ಸೊಭಾಣ್ ನಿರ್ಮಾಣದ ಕೊಂಕಣಿ ಚಲನಚಿತ್ರ ಅಸ್ಮಿತಾಯ್ ಇದರ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಆ. 13 ರಂದು ಮಂಗಳೂರಿನ ಭಾರತ್ ಸಿನೆಮಾದಲ್ಲಿ ನಡೆಯಿತು. ಅನಿವಾಸಿ ಉದ್ಯಮಿ ರೊನಾಲ್ಡ್ ಪಿಂಟೊ ಇವರು ಡೋಲು ಬಾರಿಸುವ ಮೂಲಕ ಟ್ರೈಲರ್ ಬಿಡುಗಡೆ ಮಾಡಿದರು.
ಚಿತ್ರದ ಪೋಸ್ಟರ್ ಅನ್ನು ರಿಯಲ್ ಎಸ್ಟೇಟ್ ಉದ್ಯಮಿ ರೋಹನ್ ಮೊಂತೇರೊ ಹಾಗೂ ಕುಕ್ಕುಟ ಕ್ಷೇತ್ರದ ಮುಂಚೂಣಿ ಉದ್ಯಮ ಐಡಿಯಲ್ ಚಿಕನ್ಸ್ ಇದರ ಮಾಲಕ ವಿನ್ಸೆಂಟ್ ಕುಟಿನ್ಹಾ ಪ್ರೀಮಿಯರ್ ಪ್ರದರ್ಶನದ ಟಿಕೇಟ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
ನಿರ್ಮಾಪಕ ಲುವಿಸ್ ಜೆ ಪಿಂಟೊ ಪ್ರಸ್ತಾವಿಕವಾಗಿ ಮಾತನಾಡಿ,’ಅದ್ದೂರಿಯಾಗಿ ನಿರ್ಮಾಣವಾದ ಚಿತ್ರದಲ್ಲಿ ಸಿನೆಮಾಕ್ಕೆ ಪೂರಕವಾದ ಎಲ್ಲಾ ಅಂಶಗಳಿದ್ದರೂ ಕೇವಲ ಸಿನೆಮಾವಾಗಿ ನಾವಿದನ್ನು ನಿರ್ಮಿಸಿಲ್ಲ. ಕೊಂಕಣಿ ಅಸ್ಮಿತೆಯ ಬಗ್ಗೆ ಜನರಿಗೆ ಮನವರಿಕೆ ಮಾಡಲು ‘ಚಲನಚಿತ್ರದಿಂದ ಚಳುವಳಿವರೆಗೆ’ ಎಂಬ ಉದ್ದೇಶವಿಟ್ಟು ಕೆಲಸ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರೇಮದ ಮೂಲಕ, ಕೊಂಕಣಿ ಅಸ್ಮಿತೆಯ ಹುಡುಕಾಟದ ಬಗ್ಗೆ ಎರಿಕ್ ಒಝೇರಿಯೊ ಬರೆದ ಮೂಲಕತೆಯನ್ನು, ಜೊಯೆಲ್ ಪಿರೇರಾ ಚಿತ್ರಕತೆಯಾಗಿ ರಚಿಸಿದ ಈ ಸಿನೆಮಾಕ್ಕೆ ವಿಲಾಸ್ ರತ್ನಾಕರ್ ನಿರ್ದೇಶನ ನೀಡಿದ್ದಾರೆ. ಬಾಲರಾಜ ಗೌಡ ಸಿನೆಮಾಟೊಗ್ರಾಫಿ, ಆಲ್ವಿನ್ ಫೆರ್ನಾಂಡಿಸ್, ಕ್ಯಾಜಿಟನ್ ಡಾಯಸ್, ಜೊಯೆಲ್ ಪಿರೇರಾ, ಎರಿಕ್ ಒಝೇರಿಯೊ ಸಂಗೀತ ನೀಡಿದ್ದಾರೆ. ಡೆನಿಸ್ ಮೊಂತೇರೊ, ಆಶ್ವಿನ್ ಡಿಕೊಸ್ತಾ, ವೆನ್ಸಿಟಾ ಡಾಯಸ್, ಸಾಯಿ ಪನಂದಿಕಾರ್, ಪ್ರಿನ್ಸ್ ಜೇಕಬ್, ನೆಲ್ಲು ಪೆರ್ಮನ್ನೂರ್, ಸ್ಟ್ಯಾನಿ ಆಲ್ವಾರಿಸ್, ಗೌರೀಶ್ ವೆರ್ಣೆಕರ್, ಸುನೀಲ್ ಸಿದ್ದಿ ಮತ್ತಿತರರು ಪ್ರಮುಖ ಭೂಮಿಕೆಯಲ್ಲಿರುವ ಈ ಸಿನೆಮಾವು ಸೆಪ್ಟೆಂಬರ್ 15 ರಿಂದ ದಕ್ಷಿಣ ಕನ್ನಡ, ಉಡುಪಿಯ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಮುಂದಿನ ದಿನಗಳಲ್ಲಿ ದೇಶ ಮತ್ತು ವಿದೇಶದ ಇತರೆಡೆ ಪ್ರದರ್ಶನಗೊಳ್ಳಲಿದೆ.