ಏಷ್ಯಾಕಪ್ ವೇಳಾಪಟ್ಟಿ : ಬಿಸಿಸಿಐ ಕಾರ್ಯದರ್ಶಿ ಮತ್ತು ಪಿಸಿಬಿ ಅಧ್ಯಕ್ಷರಿಂದ ಅಂತಿಮ

ನವದೆಹಲಿ :ಈ ಬಾರಿ ಏಷ್ಯಾಕಪ್​ ಆತಿಥ್ಯವನ್ನು ಪಾಕಿಸ್ತಾನ ವಹಿಸಿದ್ದು, ಭದ್ರತಾ ನೆಪವೊಡ್ಡಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಮಾಡಲು ನಿರಾಕರಿಸಿತ್ತು. ಬಳಿಕ ನಡೆದ ಚರ್ಚೆಗಳಲ್ಲಿ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್ (ಪಿಸಿಬಿ) ​ತೆಗೆದುಕೊಂಡ ಪಂದ್ಯಗಳ ವಿತರಣಾ ಒಪ್ಪಿಗೆಯಂತೆ ಇಂಡೋ ಮತ್ತು ಪಾಕ್​ ನಡುವಣ ಬಹು ನಿರೀಕ್ಷಿತ ಏಷ್ಯಾಕಪ್ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್​ ಧುಮಾಲ್ ಬುಧವಾರ ಖಚಿತಪಡಿಸಿದ್ದಾರೆ. ಏಷ್ಯಾಕಪ್​ ​ಪಂದ್ಯಗಳನ್ನು ಆಯೋಜಿಸಲು ರಾಷ್ಟ್ರಗಳು ನಿಗದಿಯಾಗಿದ್ದರೂ ಗೊಂದಲಗಳು ಮಾತ್ರ ಮುಗಿದಿಲ್ಲ.
ಏಷ್ಯಾಕಪ್ ವೇಳಾಪಟ್ಟಿಯನ್ನು ಬಿಸಿಸಿಐ ಕಾರ್ಯದರ್ಶಿ ಮತ್ತು ಪಿಸಿಬಿ ಅಧ್ಯಕ್ಷ ಅಂತಿಮಗೊಳಿಸಿರುವ ಬಗ್ಗೆ​ ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್​ ಧುಮಾಲ್ ಮಾಹಿತಿ ನೀಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆಗಿನ ಸಭೆಗಾಗಿ ದಕ್ಷಿಣ ಆಫ್ರಿಕದ ಡರ್ಬನ್‌ನಲ್ಲಿರುವ ಧುಮಾಲ್ ಅವರು, ಏಷ್ಯಾಕಪ್ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ನಾಳೆ ಗುರುವಾರ ಐಸಿಸಿ ಜೊತೆ ಸಭೆಗೂ ಮುನ್ನ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮತ್ತು ಪಿಸಿಬಿ ನೂತನ ನಿರ್ವಹಣಾ ಸಮಿತಿ ಅಧ್ಯಕ್ಷ ಝಾಕಾ ಅಶ್ರಫ್ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

2010 ರ ಆವೃತ್ತಿಯಂತೆಯೇ ಭಾರತ ಮತ್ತು ಪಾಕಿಸ್ತಾನ ಪಂದ್ಯ ದಂಬುಲಾದಲ್ಲಿ ಆಡುವ ಸಾಧ್ಯತೆಯಿದೆ. ಪಾಕಿಸ್ತಾನ ತವರಿನಲ್ಲಿ ಏಕೈಕ ಪಂದ್ಯವನ್ನು ನೇಪಾಳದ ವಿರುದ್ಧ ಆಡಲಿದೆ. ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ, ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಮತ್ತು ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ 3 ಪಂದ್ಯಗಳು ಶ್ರೀಲಂಕಾದಲ್ಲೇ ನಡೆಯುವುದು ಪಕ್ಕಾ ಎನ್ನಲಾಗಿದೆ.

ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆ ಎಂದು ಪಾಕಿಸ್ತಾನ ಕ್ರೀಡಾ ಸಚಿವ ಎಹ್ಸಾನ್ ಮಜಾರಿ ಹೇಳಿರುವಂತೆ ಪಾಕಿಸ್ತಾನ ಮಾಧ್ಯಮಗಳಿಂದ ಹೊರಹೊಮ್ಮುತ್ತಿರುವ ವರದಿಗಳನ್ನು ಧುಮಾಲ್ ತಳ್ಳಿಹಾಕಿದ್ದಾರೆ. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿಲ್ಲ. ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ವೇಳಾಪಟ್ಟಿಯನ್ನು ಮಾತ್ರ ಅಂತಿಮಗೊಳಿಸಲಾಗಿದೆ ಎಂದು ಧುಮಾಲ್ ಹೇಳಿದ್ದಾರೆ.