ಏಷ್ಯಾಕಪ್: ಸೆಪ್ಟೆಂಬರ್​ 2ರಂದು ಭಾರತ vs ಪಾಕ್ ಪಂದ್ಯ, ಕೊಲಂಬೊ ತಲುಪಿದ ರೋಹಿತ್‌ ಬಳಗ!

ಕೊಲಂಬೊ (ಶ್ರೀಲಂಕಾ): ಪಾಕಿಸ್ತಾನದ ಮುಲ್ತಾನ್​ ಅಂತರರಾಷ್ಟ್ರೀಯ ಕ್ರಿಕೆಟ್​ ಮೈದಾನದಲ್ಲಿ ನೇಪಾಳ ಮತ್ತು ಪಾಕಿಸ್ತಾನದ ನಡುವೆ ಉದ್ಘಾಟನಾ ಪಂದ್ಯ ನಡೆಯುತ್ತಿದೆ.ಇನ್ನೊಂದೆಡೆ, ಕಳೆದ 6 ದಿನಗಳಿಂದ ಏಷ್ಯಾಕಪ್​ ಮತ್ತು ವಿಶ್ವಕಪ್​ ಹಿನ್ನೆಲೆಯಲ್ಲಿ ಬೆಂಗಳೂರಿನ ಆಲೂರಿನಲ್ಲಿ ಕಠಿಣ ಅಭ್ಯಾಸ ನಡೆಸಿದ ಭಾರತ ಕ್ರಿಕೆಟ್ ತಂಡ ಇಂದು ಶ್ರೀಲಂಕಾ ದೇಶಕ್ಕೆ ತೆರಳಿದೆ. ಸೆಪ್ಟೆಂಬರ್​ 2ರಂದು ನಡೆಯುವ ಭಾರತ-ಪಾಕಿಸ್ತಾನ ನಡುವಣ ಪಂದ್ಯಕ್ಕೆ ಕೋಟ್ಯಂತರ ಕ್ರಿಕೆಟ್‌ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದಾರೆ.ಬೆಂಗಳೂರಿನ ಎನ್​ಸಿಎಯಲ್ಲಿ ಕಠಿಣ ಅಭ್ಯಾಸ ನಡೆಸಿದ ಭಾರತ ಕ್ರಿಕೆಟ್ ತಂಡ ಇಂದು ಏಷ್ಯಾಕಪ್​ ಟೂರ್ನಿಗಾಗಿ ಶ್ರೀಲಂಕಾ ತಲುಪಿದೆ.

ಮಾರ್ಚ್​ ತಿಂಗಳಲ್ಲಿ ರೋಹಿತ್​ ಶರ್ಮಾ ನಾಯಕತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಹುತೇಕ ಏಷ್ಯಾಕಪ್‌ಗೆ ಆಯ್ಕೆಯಾಗಿರುವ ತಂಡವೇ ಮೈದಾನಕ್ಕಿಳಿದಿತ್ತು. ಟೂರ್ನಿ ಭಾರತದಲ್ಲೇ ನಡೆದಿದ್ದರೂ ಮೂರು ಪಂದ್ಯಗಳ ಪೈಕಿ ಎರಡನ್ನು ಸೋತು ಒಂದರಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಇತ್ತೀಚೆಗೆ ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಪಂದ್ಯದಲ್ಲಿ ಬಹುತೇಕ ಹೊಸಬರು ಮತ್ತು ಪ್ರಯೋಗಾತ್ಮಕ ತಂಡವನ್ನೇ ಕಣಕ್ಕಿಳಿಸಲಾಗಿತ್ತು. ಇದೀಗ, ಸುಮಾರು ಐದು ತಿಂಗಳ ನಂತರ ಸಂಪೂರ್ಣ ಏಕದಿನ ತಂಡ ಮೈದಾನದಲ್ಲಿ ಕಾಣಿಸಲಿದೆ.

ಮೊದಲೆರಡು ಪಂದ್ಯಕ್ಕೆ ರಾಹುಲ್ ಅಲಭ್ಯ: ಏಷ್ಯಾಕಪ್​ನ ಗುಂಪು ಹಂತದ ಪಂದ್ಯಗಳಿಗೆ ವಿಕೆಟ್​ ಕೀಪರ್, ಬ್ಯಾಟರ್​ ಕೆ.ಎಲ್.ರಾಹುಲ್​ ಇರುವುದಿಲ್ಲ ಎಂದು ನಿನ್ನೆ ರಾಹುಲ್​ ದ್ರಾವಿಡ್​ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದರು. ರಾಹುಲ್ ಅವರು​ ಸೆಪ್ಟೆಂಬರ್ 4ರ ವರೆಗೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್​ಸಿಎ) ಅಭ್ಯಾಸ ಮತ್ತು ಚೇತರಿಕೆ ಶಿಬಿರದಲ್ಲಿ ಇರಲಿದ್ದಾರೆ. ಎನ್​ಸಿಎಯ ಸಿಬ್ಬಂದಿ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದರು. ಸೆ.4 ರಂದು ರಾಹುಲ್​ ಅವರ ಫಿಟ್​ನೆಸ್ ಅ​ನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗುವುದು ಎಂದಿದ್ದಾರೆ. ಫಿಟ್​ನೆಸ್​ನಲ್ಲಿ ಪಾಸಾದರೆ, ಲಂಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಸೂಪರ್​ ಫೋರ್​ ಹಂತದ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಭಾರತ ತಂಡ ಇಂದು ಕೊಲಂಬೊ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಬಸ್​ನಲ್ಲಿ ಹೊಟೇಲ್‌ಗೆ ಪ್ರಯಾಣ ಬೆಳೆಸಿತು. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಸಂಪೂರ್ಣ ತಂಡ ಲಂಕಾದಲ್ಲಿದೆ. ಪ್ರಕಟಿತ ತಂಡ ಸದಸ್ಯ ಕೆ.ಎಲ್.ರಾಹುಲ್​ ಗಾಯದ ಕಾರಣ ಬೆಂಗಳೂರಿನಲ್ಲಿದ್ದಾರೆ.

ಮಧ್ಯಮ ಕ್ರಮಾಂಕದ 4ನೇ ಸ್ಥಾನದಲ್ಲಿ ಸಂಪೂರ್ಣವಾಗಿ ಫಿಟ್​ ಆಗಿರುವ ಶ್ರೇಯಸ್​ ಅಯ್ಯರ್​ ಬ್ಯಾಟಿಂಗ್​ ಮಾಡಿದರೆ, ಇಶಾನ್​ ಕಿಶನ್​ ವಿಕೆಟ್​ ಕೀಪರ್​ ಮತ್ತು ಬ್ಯಾಟರ್​ ಆಗಿ 5ನೇ ಸ್ಥಾನದಲ್ಲಿ ಆಡು ಸಾಧ್ಯತೆ ಇದೆ. ಸೂರ್ಯ ಕುಮಾರ್​ ಯಾದವ್​ ಮತ್ತು ತಿಲಕ್​ ವರ್ಮಾರಲ್ಲಿ ಸ್ಥಾನಕ್ಕಾಗಿ ಪೈಪೋಟಿ ಇರಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ (ಎಎನ್​ಐ)

ಏಷ್ಯಾಕಪ್‌ ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನೇಪಾಳ ಇದ್ದು, ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ಥಾನ, ಶ್ರೀಲಂಕಾ ತಂಡಗಳಿವೆ. ಏಷ್ಯಾಕಪ್​ನ ಗುಂಪು ಹಂತದಲ್ಲಿ 6 ಪಂದ್ಯಗಳು ನಡೆಯಲಿದೆ. ಗುಂಪು ಹಂತದಿಂದ ಎರಡು ತಂಡಗಳು ಹೊರಹೋದ ನಂತರ ಸೂಪರ್​ ಫೋರ್​ನ ಪಂದ್ಯಗಳು ಆರಂಭವಾಗಲಿದೆ. ಫೈನಲ್​ ಸಪ್ಟೆಂಬರ್ 17ರಂದು ನಿಗದಿಯಾಗಿದೆ.