ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಆರ್ಯವರ್ಧನ್ : ಎಸ್.ನಾರಾಯಣ್ ‘ಸೂರ್ಯವಂಶ’ ದಿಂದ ಮತ್ತೆ ಕಿರುತೆರೆಗೆ ಅನಿರುದ್ದ್

ಅಭಿಮಾನಿಗಳ ನೆಚ್ಚಿನ ಆರ್ಯವರ್ಧನ್ ಖ್ಯಾತಿಯ ಅನಿರುದ್ದ್ ಮತ್ತೆ ಕಿರುತೆರೆಗೆ ಬರಲು ಸಜ್ಜಾಗಿದ್ದಾರೆ. ಈ ಬಾರಿ ಕನ್ನಡದ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್ ರವರು ಅನಿರುದ್ದ್ ಕೈ ಹಿಡಿದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ಮಾಡಿ ಹೆಸರುಗಳಿಸಿರುವ ಎಸ್.ನಾರಾಯಣ್ ಉದಯ ಟಿವಿಗಾಗಿ “ಸೂರ್ಯವಂಶ” ಧಾರಾವಾಹಿಯನ್ನು ರಚಿಸಿ ನಿರ್ದೇಶಿಸುತ್ತಿದ್ದಾರೆ. ವಿಶೇಷವೆಂದರೆ ಡಾ. ವಿಷ್ಣುವರ್ಧನ್ ರವರು ನಟಿಸಿದ್ದ ಸೂರ್ಯವಂಶ ಹೆಸರಿನ ಧಾರಾವಾಹಿಯಲ್ಲಿ ಅನಿರುದ್ದ್ ನಟಿಸುತ್ತಿರುವುದು. ವಿಷ್ಣು ದಾದಾ ನಟಿಸಿದ್ದ ಸೂರ್ಯವಂಶ ಚಿತ್ರವು ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಅಳಿಯ ಅನಿರುದ್ದ್ ಅವರ ಸೂರ್ಯವಂಶ ಕೂಡಾ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಲಿ ಎನ್ನುವುದು ಎಲ್ಲರ ಹಾರೈಕೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಹುಮುಖ ಪ್ರತಿಭೆಯ ನಟ ಅನಿರುದ್ಧ್, “ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ” ಎಂದು ಹೇಳಿದ್ದಾರೆ.

ತಮ್ಮ ನೆಚ್ಚಿನ ನಟನನ್ನು ತೆರೆ ಮೇಲೆ ಮತ್ತೆ ಕಾಣಲು ಅಭಿಮಾನಿಗಳೂ ಕಾತರರಾಗಿದ್ದಾರೆ.