ಕಲಾವಿದರಿಗೆ ಮೈಸೂರು ದಸರಾದಲ್ಲಿದೆ ಈ ಒಂದು ಭರ್ಜರಿ ಅವಕಾಶ!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ–2026ರ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನ ಆಯೋಜಿಸಲಾಗಿದೆ. ರಾಜ್ಯದ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಂದ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ.

ಮೈಸೂರಿನ ಸಿದ್ದಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ) ಆವರಣದಲ್ಲಿ ಪ್ರದರ್ಶನ ನಡೆಯಲಿದೆ. ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಛಾಯಾಚಿತ್ರ ಹಾಗೂ ಅನ್ವಯಕಲೆ ವಿಭಾಗಗಳಲ್ಲಿ ವೃತ್ತಿಪರ ಮತ್ತು ಹವ್ಯಾಸಿ ಕಲಾವಿದರಿಗೆ ಅವಕಾಶವಿದೆ. ಸಾಂಪ್ರದಾಯಿಕ ಶಿಲ್ಪಕಲೆ, ಚಿತ್ರಕಲೆ ಹಾಗೂ ಕರಕುಶಲ ವಿಭಾಗಗಳಲ್ಲೂ ಕಲಾಕೃತಿಗಳನ್ನು ಸ್ವೀಕರಿಸಲಾಗುತ್ತದೆ.

ಪ್ರತಿ ವಿಭಾಗದಲ್ಲೂ ಅತ್ಯುತ್ತಮ ಮೂರು ಕಲಾಕೃತಿಗಳಿಗೆ ಬಹುಮಾನ ನೀಡಲಾಗುತ್ತದೆ. ಕಲಾಕೃತಿಗಳನ್ನು ಸೆಪ್ಟೆಂಬರ್ 15ರಿಂದ 30ರವರೆಗೆ ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಕಾವಾ ಕಾಲೇಜಿನಲ್ಲಿ ಸಲ್ಲಿಸಬಹುದು.

ಅರ್ಜಿ ನಮೂನೆಯನ್ನು ಕಾವಾ ಹಾಗೂ ಮೈಸೂರು ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್‌ಗಳಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 98445 95568, 77958 08422, 91411 61157 ಸಂಪರ್ಕಿಸಬಹುದು.